ಸೌಬಿನ್ ಶಾಹಿರ್ ಮತ್ತು ಶ್ರೀನಾಥ್ ಭಾಸಿ ಅಭಿನಯದ ಮಲಯಾಳಂ ಸರ್ವೈವಲ್ ಥ್ರಿಲ್ಲರ್ 'ಮಂಜುಮ್ಮೆಲ್ ಬಾಯ್ಸ್' (Manjummel Boys) ಸಾಕಷ್ಟು ಸದ್ದು ಮಾಡಿದೆ. ಫೆಬ್ರವರಿ 22ರಂದು ತೆರೆಕಂಡಿರುವ ಈ ಚಿತ್ರ ಸಿನಿಪ್ರಿಯರನ್ನು ಸೂಜಿಗಲ್ಲಿನಂತೆ ಸೆಳೆಯುವಲ್ಲಿ ಯಶ ಕಂಡಿದೆ. ಆದರೆ ಇದೀಗ ಚಿತ್ರತಂಡ ಕಾನೂನು ಅಡೆತಡೆಯಲ್ಲಿ ಸಿಲುಕಿದೆ.
ಖ್ಯಾತ ಸಂಗೀತ ನಿರ್ದೇಶಕ ಆರ್.ಇಳಯರಾಜ ಅವರು ಮಂಜುಮ್ಮೆಲ್ ಬಾಯ್ಸ್‌ಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ತಮ್ಮ ಅನುಮತಿ ಪಡೆಯದೇ ತಮಿಳಿನ 'ಗುಣ' ಚಿತ್ರದ 'ಕಣ್ಮಣಿ ಅನ್ಬೋದು ಕಾದಲನ್' ಹಾಡನ್ನು 'ಕಾನೂನು ಬಾಹಿರವಾಗಿ ಬಳಕೆ' ಮಾಡಿಕೊಂಡಿರುವುದಾಗಿ ಅವರು ಆರೋಪಿಸಿದ್ದಾರೆ.
ಮಂಜುಮ್ಮೆಲ್ ಬಾಯ್ಸ್ 11 ಸ್ನೇಹಿತರ ಗುಂಪಿನ ಕಥೆ ಒಳಗೊಂಡಿದೆ. ಕೊಡೈಕ್ಕೆನಾಲ್ ಪ್ರವಾಸ ಕೈಗೊಂಡು ದಟ್ಟಾರಣ್ಯದಲ್ಲಿ ಸಿಲುಕಿ ಬದುಕುಳಿಯುವ ಥ್ರಿಲ್ಲರ್ ಮೂವಿ ಇದು. ಸೌತ್ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರ 1991ರ ಗುಣ ಸಿನಿಮಾದ ನಂತರ, ಮತ್ತೊಮ್ಮೆ ಹೆಸರಿಸಲಾಗಿರುವ ಗುಣ ಗುಹೆಯೊಳಗಿನ ಪ್ರಪಾತಕ್ಕೆ ಸ್ನೇಹಿತನೋರ್ವ ಆಯತಪ್ಪಿ ಬಿದ್ದಾಗ ಈ ಸಿನಿಮಾ ಕಠೋರ ತಿರುವು ಪಡೆಯುತ್ತದೆ. ಇತರರು ತಮ್ಮ ಸ್ನೇಹಿತನನ್ನು ಉಳಿಸಿಕೊಳ್ಳಲು ಎಲ್ಲಾ ಅಡೆತಡೆಗಳ ವಿರುದ್ಧ ಹೇಗೆ ಹೋರಾಡುತ್ತಾರೆ ಎಂಬುದೇ ಕಥೆ.
ಚಿತ್ರದುದ್ದಕ್ಕೂ ನಟರು ಕಮಲ್ ಹಾಸನ್ ಅವರ ಚಿತ್ರದ ಬಗ್ಗೆ ಅನೇಕ ಉಲ್ಲೇಖಗಳನ್ನು ಮಾಡುತ್ತಾರೆ. ಇದು ಗುಹೆ ನೋಡಬೇಕೆನ್ನುವ ಅವರ ಕುತೂಹಲವನ್ನು ಮತ್ತಷ್ಟು ಕೆರಳಿಸುತ್ತದೆ. ಅಲ್ಲದೇ, 1991ರ ಗುಣ ಚಿತ್ರದ ಕಣ್ಮಣಿ ಅನ್ಬೋದು ಕಾದಲನ್ ಹಾಡನ್ನು ಚಿತ್ರದ ಒಂದು ಪ್ರಮುಖ ದೃಶ್ಯದಲ್ಲಿ ಬಳಸಲಾಗಿದೆ. ಪರಿಣಾಮ, ಇದೀಗ ಇಳಯರಾಜ ಚಿತ್ರತಂಡಕ್ಕೆ ಕಾಪಿರೈಟ್ ನೋಟಿಸ್ ಕಳುಹಿಸಿದ್ದಾರೆ. ತಮ್ಮ ಒಪ್ಪಿಗೆ ಪಡೆಯದೇ ಈ ಹಾಡನ್ನು ಬಳಸಲಾಗಿದೆ ಎಂದು ಅವರು ದೂರಿದ್ದಾರೆ.