ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಸಾರ್ವಜನಿಕಗೊಳಿಸಿದ್ದಾರೆ. ಪಾಪರಾಜಿಗಳಲ್ಲಿ ಇನ್ಸ್ಟಾಗ್ರಾಮ್ಗೆ ಬರುವುದಾಗಿ ತಿಳಿಸಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಇನ್‌ಸ್ಟಾಗ್ರಾಮ್ ಸಾರ್ವಜನಿಕರಿಗೆ ಮುಕ್ತವಾಗಿದೆ. ಇಬ್ರಾಹಿಂ ತಮ್ಮ ಮೊದಲ ಇನ್‌ಸ್ಟಾಗ್ರಾಮ್ ಪೋಸ್ಟ್ ಅನ್ನು ಬೆಳಗ್ಗೆ 11 ಗಂಟೆ 13 ನಿಮಿಷಕ್ಕೆ ಶೇರ್ ಮಾಡಿದ್ದಾರೆ. ಇದು ಶೂ ಕಂಪನಿಯೊಂದರ ಫೋಟೋಶೂಟ್ ಆಗಿದ್ದು ಇಬ್ರಾಹಿಂ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.
ಮೊದಲೆರಡು ಫೋಟೋಗಳು ಒಂದೇ ಉಡುಪಿನಲ್ಲಿವೆ. ಗ್ರೀನ್ ಆ್ಯಂಡ್ ಕ್ರೀಮ್ ಕಲರ್ ಕಾಂಬಿನೇಶನ್ನ ಪ್ಯಾಂಟ್ ಶರ್ಟ್ ಧರಿಸಿದ್ದು, ಶೂ ಕೂಡ ಹಸಿರು ಬಣ್ಣದ್ದಾಗಿದೆ. ಒಳಾಂಗಣ ಸೆಟ್ಟಿಂಗ್ ಹಿನ್ನೆಲೆಯಲ್ಲಿ ಫೋಟೋಶೂಟ್ ಮಾಡಿಸಲಾಗಿದೆ. ನಂತರದ ಎರಡು ಫೋಟೋಗಳು ಹೊರಾಂಗಣದಿಂದ ಬಂದಿವೆ. ಸೈಕಲ್ ಬಳಿ ಸ್ಪೋರ್ಟ್ಸ್ ಶಾರ್ಟ್ಸ್, ಶರ್ಟ್ ಧರಿಸಿ ಪೋಸ್ ಕೊಟ್ಟಿದ್ದಾರೆ.
ಫೋಟೋಗಳನ್ನು ಹಂಚಿಕೊಂಡ ಖ್ಯಾತ ನಟನ ಪುತ್ರ, "ಪರಂಪರೆ? ನಾನು ನನ್ನದೇ ಆದ ಸ್ವಂಥದ್ದನ್ನು ರಚಿಸುತ್ತೇನೆ'' (Legacy? I will create my own) ಎಂದು ಬರೆದುಕೊಂಡಿದ್ದಾರೆ. ಉದಯೋನ್ಮುಖ ನಟ ತಮ್ಮ ಖಾತೆಯನ್ನು ಸಾರ್ವಜನಿಕಗೊಳಿಸಿದ ತಕ್ಷಣ, ಅಭಿಮಾನಿಗಳು ಕಾಮೆಂಟ್ ವಿಭಾಗದಲ್ಲಿ ತಮ್ಮ ಪ್ರತಿಕ್ರಿಯೆ ಕೊಡಲು ಶುರುಮಾಡಿದ್ದಾರೆ. ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅಭಿಮಾನಿಗಳ ಪೈಕಿ ಹೆಚ್ಚಿನವರು, ಇಬ್ರಾಹಿಂ ಮತ್ತು ಸೈಫ್ ಒಂದೇ ರೀತಿ ಕಾಣುತ್ತಾರೆಂದು ತಿಳಿಸಿದ್ದಾರೆ.
ಇಬ್ರಾಹಿಂ ಈವರೆಗೆ ಖಾಸಗಿ ಇನ್‌ಸ್ಟಾಗ್ರಾಮ್ ಖಾತೆ ಹೊಂದಿದ್ದರು. ಇದನ್ನು ಸೆಲೆಬ್ರಿಟಿಗಳಾದ ಆರ್ಯನ್ ಖಾನ್, ಮೃಣಾಲ್ ಠಾಕೂರ್, ಆಲಿಯಾ ಭಟ್ ಸೇರಿದಂತೆ ಕೆಲವರು ಫಾಲೋ ಮಾಡಿದ್ದರು. ಇಬ್ರಾಹಿಂ ಸಹೋದರಿ ನಟಿ ಸಾರಾ ಅಲಿ ಖಾನ್ ಇನ್ಸ್ಟಾಗ್ರಾಮ್ನಲ್ಲಿ ಸಾಕಷ್ಟು ಸಕ್ರಿಯರು. ಇದೀಗ ಇಬ್ರಾಹಿಂ ಚೊಚ್ಚಲ ಚಿತ್ರಕ್ಕೂ ಮುನ್ನ ತಮ್ಮ ಖಾತೆಯನ್ನು ಸಾರ್ವಜನಿಕಗೊಳಿಸಿದ್ದಾರೆ.