ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಸಹೋದರ ಅಮನ್ ಪ್ರೀತ್ ಸಿಂಗ್ ಸೇರಿದಂತೆ ಒಟ್ಟು 10 ಮಂದಿಯನ್ನು ಸೋಮವಾರದಂದು ಹೈದರಾಬಾದ್‌ನಲ್ಲಿ ಬಂಧಿಸಲಾಗಿದೆ. ಸೈಬರಾಬಾದ್ ಪೊಲೀಸರ ಪ್ರಕಾರ, 35 ಲಕ್ಷ ರೂ. ಮೌಲ್ಯದ 199 ಗ್ರಾಂ ಕೊಕೇನ್ ಅನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ತೆಲಂಗಾಣ ಆ್ಯಂಟಿ ನಾರ್ಕೋಟಿಕ್ಸ್ ಬ್ಯೂರೋ (ಟಿಜಿಎಎನ್‌ಬಿ) ಮತ್ತು ಸೈಬರಾಬಾದ್‌ನ ನರಸಿಂಗಿ ಪೊಲೀಸರು ಸೇರಿ ಜಂಟಿ ದಾಳಿ ನಡೆಸಿದ್ದು, ಐವರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಉಳಿದ ಬಂಧಿತ ಐವರು ಗ್ರಾಹಕರಲ್ಲಿ ಅಮನ್ ಪ್ರೀತ್ ಸಿಂಗ್ ಕೂಡಾ ಒಬ್ಬರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಪ್ತಚರ ಮಾಹಿತಿ ಆಧಾರದ ಮೇಲೆ, ವಿಶಾಲ್ ನಗರದ ಫ್ಲ್ಯಾಟ್‌ನಲ್ಲಿ ದಾಳಿ ನಡೆಸಲಾಯಿತು. ಅವರ ಬಳಿ ಇದ್ದ 35 ಲಕ್ಷ ರೂ. ಮೌಲ್ಯದ 199 ಗ್ರಾಂ ಕೊಕೇನ್ ಅನ್ನು ವಶಕ್ಕೆ ಪಡೆಯಲಾಯಿತು. ಐವರು ಡ್ರಗ್ ಡೀಲರ್ಗಳಲ್ಲದೇ ಅಧಿಕಾರಿಗಳು ಅಮನ್ ಪ್ರೀತ್ ಸಿಂಗ್ (ಗ್ರಾಹಕ) ಅವರನ್ನೂ ಅರೆಸ್ಟ್ ಮಾಡಿದ್ದಾರೆ.
ಡ್ರಗ್ ಗ್ರಾಹಕರು: "ಈವರೆಗೆ, ಐವರನ್ನು ಕರೆತಂದು ಪರೀಕ್ಷಿಸಲಾಗಿದೆ. ರಿಸಲ್ಟ್ ಪಾಸಿಟಿವ್ ಎಂದು ಬಂದಿದೆ. ಗ್ರಾಹಕರುಗಳಾದ ಅನಿಕೇತ್ ರೆಡ್ಡಿ, ಪ್ರಸಾದ್, ಅಮನ್ ಪ್ರೀತ್ ಸಿಂಗ್, ಮಧುಸೂಧನ್ ಮತ್ತು ನಿಖಿಲ್ ದಾಮನ್ ಕೊಕೇನ್ ತೆಗೆದುಕೊಂಡಿರುವುದು ದೃಢಪಟ್ಟಿದೆ. ಎಲ್ಲರನ್ನೂ ಎಸ್‌ಒಟಿ ತಂಡ ವಶಕ್ಕೆ ತೆಗೆದುಕೊಂಡಿದ್ದು, ವೈದ್ಯಕೀಯ ಪರೀಕ್ಷೆ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು'' ಎಂದು ಡಿಸಿಪಿ ರಾಜೇಂದ್ರ ನಗರ್ ಶ್ರೀನಿವಾಸ್ ತಿಳಿಸಿದ್ದಾರೆ.