ಇತ್ತೀಚೆಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಆರೋಗ್ಯದಲ್ಲಿ ಕೊಂಚ ಏರುಪೇರಾಗಿತ್ತು. ಬುಧವಾರ ಅವರನ್ನು ಅಹಮದಾಬಾದ್‌ನ ಕೆಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನಿರ್ಜಲೀಕರಣ ಮತ್ತು ಹೀಟ್ ಸ್ಟ್ರೋಕ್ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆದಿರುವ ನಟ ಬಳಿಕ ಮುಂಬೈಗೆ ಮರಳಿದ್ದಾರೆ. ಭಾನುವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಭಾಗಿಯಾಗುವ ನಿರೀಕ್ಷೆಗಳಿವೆ. ಸದ್ಯ ಈ ಬಗ್ಗೆ ಬಾಲಿವುಡ್ನ ಫಿಟ್ನೆಸ್ ಐಕಾನ್ ಮಲೈಕಾ ಅರೋರಾ ಮಾತನಾಡಿದ್ದಾರೆ.
ಮಲೈಕಾ ಅರೋರಾ, ಬಾಲಿವುಡ್ನ ಖ್ಯಾತ ನೃತ್ಯಗಾರ್ತಿ. ಸದ್ಯ ಕಿರುತೆರೆ ಕಾರ್ಯಕ್ರಮಗಳ ತೀರ್ಪುಗಾರರಾಗಿ ವೃತ್ತಿಜೀವನ ಮುಂದುವರಿಸುತ್ತಿದ್ದಾರೆ. ಇವರು ಫಿಟ್ನೆಸ್ ಐಕಾನ್ ಎಂದೇ ಜನಪ್ರಿಯ. ಈ ನಟಿಗೆ 50 ವರ್ಷ ಅಂದ್ರೆ ಯಾರೂ ನಂಬಲಾರರು. ಆ ಮಟ್ಟಿಗೆ ತಮ್ಮ ಸೌಂದರ್ಯ, ಆರೋಗ್ಯವನ್ನು ಕಾಪಾಡಿಕೊಂಡಿದ್ದಾರೆ. ದಿನನಿತ್ಯ ವ್ಯಾಯಾಮ, ಉತ್ತಮ ಆಹಾರವೇ ಫಿಟ್ನೆಸ್ನ ಮೂಲಮಂತ್ರವಂತೆ. ನಟಿ ತಮ್ಮ ವರ್ಕ್ಔಟ್ ಲೊಕೇಶನ್ಗೆ ತೆರಳುವ ವಿಡಿಯೋಗಳು ಪ್ರತಿದಿನ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತವೆ. ಕೈಯಲ್ಲೊಂದು ವಾಟರ್ ಬಾಟಲ್ ಇದ್ದೇ ಇರುತ್ತದೆ. ಫಿಟ್ನೆಸ್ ವಿಚಾರದಲ್ಲಿ ಹಲವರಿಗೆ ಇವರು ರೋಲ್ ಮಾಡೆಲ್ ಅಂದ್ರೆ ತಪ್ಪಾಗಲ್ಲ. ಅದರಂತೆ ಇತ್ತೀಚೆಗೆ, ಮಾಧ್ಯಮದವರು ಮಲೈಕಾ ಬಳಿ ಕೆಲವು ಸಲಹೆಗಳನ್ನು ಕೇಳಿದ್ದಾರೆ. ಹೀಟ್ ವೇವ್ ಹೆಚ್ಚುತ್ತಿದೆ, ಶಾರುಖ್ ಅವರಿಗೂ ಹೀಟ್ ಸ್ಟ್ರೋಕ್ ಆಗಿದೆ. ಇದಕ್ಕೇನು ಸಲಹೆ ನೀಡುತ್ತೀರಿ ಎಂಬ ಪಾಪರಾಜಿಗಳು, ಮಾಧ್ಯಮದವರ ಪ್ರಶ್ನೆಗೆ ನಟಿ ಹೇಳಿದ್ದಿಷ್ಟು.
''ಅದಕ್ಕೇ ಹೇಳೋದು. ನಾವು ಪ್ರಕೃತಿಯನ್ನು ರಕ್ಷಿಸಬೇಕು. ನಿಸರ್ಗದ ಸುರಕ್ಷತೆ ಬಗ್ಗೆ ಜಾಗರೂಕರಾಗಿರಬೇಕು. ಇದೊಂದೇ ದಾರಿ. ಆಗ ಪ್ರಕೃತಿ ಕೂಡ ನಮ್ಮನ್ನು ಪ್ರೀತಿಸುತ್ತದೆ. ಹೀಟ್ ವೇವ್‌ನಂತಹ ಸಮಸ್ಯೆಗೆ ನಾವು ಹೆಚ್ಚೇನೂ ಮಾಡಲು ಸಾಧ್ಯವಿಲ್ಲ. ಆದ್ರೆ, ಹೈಡ್ರೇಟ್ ಆಗಿರಿ. ಶಾಲು, ಕೊಡೆಗಳನ್ನು ಬಳಸಿ. ಕೂಲ್, ಕಂಫರ್ಟಬಲ್ ಡ್ರೆಸ್ ಆಯ್ದುಕೊಳ್ಳಿ. ಹೆಚ್ಚು ನೀರು ಕುಡಿಯಿರಿ. ಸನ್ಸ್ಕ್ರೀನ್ ಬಳಸಿ ಎಂದಷ್ಟೇ ಹೇಳಬಲ್ಲೆ'' - ಮಲೈಕಾ ಅರೋರಾ.