ನಿರ್ದೇಶಕ ಕ್ರಿಶ್ ಜಗರ್ಲಮುಡಿ ಮತ್ತು ನಟ ಪವನ್ ಕಲ್ಯಾಣ್ ಕಾಂಬಿನೇಶನ್ನ ಬಹುನಿರೀಕ್ಷಿತ ಚಿತ್ರ 'ಹರಿ ಹರ ವೀರ ಮಲ್ಲು' (Hari Hara Veera Mallu-HHVM). 2020ರಲ್ಲಿ ಸಿನಿಮಾ ಪ್ರಾರಂಭ ಆದಾಗಿನಿಂದಲೂ ಸಾಕಷ್ಟು ಗಮನ ಸೆಳೆದಿದೆ. ಅದಾಗ್ಯೂ, ಇತ್ತೀಚೆಗೆ ಚಿತ್ರ ಸ್ಥಗಿತಗೊಂಡಿರಬಹುದು ಎಂಬ ಊಹಾಪೋಹಗಳೆದ್ದಿದ್ದವು. ಚಿತ್ರನಿರ್ಮಾಪಕರು ಮೌನ ಮುರಿದಿದ್ದು, ಪ್ರಾಜೆಕ್ಟ್ನ ಕೆಲಸಗಳು ಮುಂದುವರಿದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಚಿತ್ರತಂಡ ಇದೀಗ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಅದ್ಭುತ ಸಿನಿಮಾ ನೀಡಲು ಉನ್ನತ ಮಟ್ಟದ ವಿಶುವಲ್ ಎಫೆಕ್ಟ್ ಕೆಲಸಗಳು ನಡೆಯುತ್ತಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರೇಕ್ಷಕರಿಗೆ ಥ್ರಿಲ್ ಸಿನಿಮಾ ನೀಡುವ ಭರವಸೆ ನೀಡಿದ್ದು, ಶೀಘ್ರದಲ್ಲೇ ಪ್ರೋಮೋ ಬಿಡುಗಡೆ ಮಾಡುವ ಸುಳಿವನ್ನೂ ನೀಡಿದ್ದಾರೆ. ಇರಾನ್, ಕೆನಡಾ, ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್‌ನಂತಹ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಯುತ್ತಿರುವ ಬಗ್ಗೆಯೂ ಮಾಹಿತಿ ನೀಡಿದೆ. ಈ ಪೋಸ್ಟ್ ನೋಡಿದ ಸಿನಿಪ್ರಿಯರು, 'ಹರಿ ಹರ ವೀರ ಮಲ್ಲು' ಹೇಗೆ ಮೂಡಿಬರಬಹುದು ಎಂದು ಅಂದಾಜಿಸುತ್ತಿದ್ದಾರೆ.
ಮೊಘಲ್ ಯುಗದ ಹಿನ್ನೆಲೆಯಲ್ಲಿ ಹರಿ ಹರ ವೀರ ಮಲ್ಲು ಸಿನಿಮಾ ಮೂಡಿ ಬರಲಿದೆ. ಮೊಘಲರಿಂದ ಕೊಹಿನೂರ್ ಅನ್ನು ಕದಿಯಲು ಹೊರಟಿರುವ 'ವೀರ ಮಲ್ಲು'ವಿನ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಪಾತ್ರ ವರ್ಗದಲ್ಲಿ ಕೆಲ ಬದಲಾವಣೆಗಳಾಗಿದೆ. ಆರಂಭದಲ್ಲಿ ಅರ್ಜುನ್ ರಾಂಪಾಲ್ ಔರಂಗಜೇಬ್ ಪಾತ್ರವನ್ನು ವಹಿಸಲು ಮುಂದಾಗಿದ್ದರು. ನಂತರ ಬಾಬಿ ಡಿಯೋಲ್ ಈ ಸ್ಥಾನಕ್ಕೆ ಬಂದರು. ಜಾಕ್ವೆಲಿನ್ ಫರ್ನಾಂಡಿಸ್ ಕೂಡ ತಂಡದಿಂದ ಹೊರನಡೆದರು. ಹಾಗಾಗಿ ನರ್ಗಿಸ್ ಫಕ್ರಿ ಅವರು ಔರಂಗಜೇಬನ ಸಹೋದರಿ ರೋಶನಾರಾ ಪಾತ್ರಕ್ಕೆ ಜೀವ ತುಂಬಲು ರೆಡಿಯಾದರು. ಅಲ್ಲದೇ, ಚಿತ್ರದಲ್ಲಿ ನಿಧಿ ಅಗರ್ವಾಲ್ ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.