ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಜೋಡಿಯಾಗಿ ನಟಿಸಿರುವ ಬಹು ನಿರೀಕ್ಷಿತ ಚಿತ್ರ 'ಮ್ಯಾಟ್ನಿ' ಶೀಘ್ರದಲ್ಲೇ ತೆರೆ ಕಾಣದಲಿದೆ ಎಂದು ಚಿತ್ರ ತಂಡ ತಿಳಿಸಿದೆ. ಹಾಡು ಹಾಗೂ ಟ್ರೈಲರ್ನಿಂದಲೇ ಗಮನ ಸೆಳೆಯುತ್ತಿದ್ದು ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲು ಸಜ್ಜಾಗಿದೆ. 'ಅಯೋಗ್ಯ' ಚಿತ್ರದ ಬಳಿಕ ಇವರಿಬ್ಬರ ಕಾಂಬಿನೇಶನ್ನಲ್ಲಿ ಮೂಡಿ ಬರುತ್ತಿರುವ ಎರಡನೇ ಚಿತ್ರ ಇದಾಗಿದೆ. 'ಮ್ಯಾಟ್ನಿ' ಚಿತ್ರ ಯಾವಾಗ ಬಿಡುಗಡೆ ಆಗುತ್ತೆ ಅಂತಾ ಪ್ರೇಕ್ಷಕರಲ್ಲಿ ಪ್ರಶ್ನೆ ಮೂಡಿತ್ತು. ಈಗ ಚಿತ್ರತಂಡದಿಂದ ಗುಡ್ ನ್ಯೂಸ್ ಸಿಕ್ಕಿದೆ.
ಲವ್ ಸ್ಟೋರಿ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ ಕಥೆ ಆಧರಿಸಿರೋ ಚಿತ್ರ ಇದಾಗಿದ್ದು, ನಾಯಕ ನಟ ನೀನಾಸಂ ಸತೀಶ್, ನಾಯಕಿ ನಟಿ ರಚಿತಾ ರಾಮ್ ಜೊತೆ ಅದಿತಿ ಪ್ರಭುದೇವ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಷ್ಟೇ ಅಲ್ಲದೆ ಪೂರ್ಣಚಂದ್ರ ಮೈಸೂರು ಹಾಗೂ ನಾಗಭೂಷಣ್, ಶಿವರಾಜ್ ಕೆ.ಆರ್. ಪೇಟೆ ಸೇರಿದಂತೆ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ.
ಈ ಸಿನಿಮಾವನ್ನು ಯುವ ನಿರ್ದೇಶಕ ಮನೋಹರ್ ಕಾಂಪಲ್ಲಿ ನಿರ್ದೇಶನ ಮಾಡಿದ್ದು, ಅದ್ಧೂರಿ ವೆಚ್ಚದಲ್ಲಿ ಪಾರ್ವತಿ ಎಸ್ ಗೌಡ ನಿರ್ಮಾಣ ಮಾಡಿದ್ದಾರೆ. ಸದ್ಯ ಹಾಡುಗಳು ಹಾಗೂ ಟ್ರೈಲರ್ನಿಂದ ಸೌಂಡ್ ಮಾಡುತ್ತಿರುವ ಮ್ಯಾಟ್ನಿ ಸಿನಿಮಾ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲು ಸಜ್ಜಾಗಿದೆ.