ಧಾರವಾಡ: ಹಾಡಹಗಲೇ ವೈದ್ಯರೊಬ್ಬರ ಮನೆಗೆ ನುಗ್ಗಿದ ಖದೀಮರು, ತಡೆಯಲು ಬಂದವರ ಮೇಲೆ ಹಲ್ಲೆ ನಡೆಸಿ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾದ ಘಟನೆ ಮಾಳಮಡ್ಡಿ ಬಡಾವಣೆಯ ಕಬ್ಬೂರ ರಸ್ತೆಯಲ್ಲಿ ಇಂದು ನಡೆದಿದೆ.
ಖ್ಯಾತ ವೈದ್ಯ ಡಾ. ಆನಂದ ಕಬ್ಬೂರ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು, ಕಳ್ಳರು ಬಂದಾಗ ಡಾ. ಆನಂದ ಅವರ ಪತ್ನಿ ವಿನೋದಿನಿ ಒಬ್ಬರೇ ಇದ್ದರು. ಮನೆಗೆ ಬಂದು ಬಾಗಿಲು ಬಡೆದಿರುವ ಇಬ್ಬರು ಕಳ್ಳರು, ಬಾಗಿಲು ತೆರೆಯುತ್ತಿದ್ದಂತೆ ತನ್ನನ್ನು ತಳ್ಳಿ ಒಳ ನುಗ್ಗಿ ಹಲ್ಲೆ ಮಾಡಿ ಮಾಂಗಲ್ಯ ಸಹ ಕಿತ್ತುಕೊಂಡಿದ್ದಾರೆ. ಬಳಿಕ ಮನೆಯ ಸಿಸಿಟಿವಿ ಕ್ಯಾಮರಾದ ಡಿವಿಆರ್ ಸಹ ಕದ್ದೊಯ್ದಿದ್ದಾರೆ. ಮಾಂಗಲ್ಯ ಸರ ಮತ್ತು ಅಂದಾಜು 25 ಸಾವಿರ ರೂ. ನಗದು ದೋಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ ಎಂದು ನಡೆದ ಘಟನೆ ಬಗ್ಗೆ ವಿನೋದಿನಿ ವಿವರಿಸಿದ್ದಾರೆ.
ಹಲ್ಲೆಯಿಂದ ತೀವ್ರ ಗಾಯಗೊಂಡಿರುವ ವಿನೋದಿನಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ಮನೆ ಜನನಿಬಿಡ ರಸ್ತೆಯಲ್ಲಿದ್ದು, ಘಟನಾ ಸ್ಥಳಕ್ಕೆ ಡಿಸಿಪಿಗಳಾದ ಮಹಾಲಿಂಗ ನಂದಗಾವಿ, ರವೀಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ATMಗಳಿಗೆ ಹಣ ತುಂಬಿಸುವ ಸಿಬ್ಬಂದಿಯಿಂದಲೇ ಕಳ್ಳತನ: ಪರಸ್ಪರ ಹೊಡೆದಾಡಿ ಸಿಕ್ಕಿಬಿದ್ದರು! - ATM THEFT CASE