2023ರ ಆಗಸ್ಟ್ 24ರಂದು ದಾಂಪತ್ಯ ಜೀವನ ಶುರು ಮಾಡಿದ್ದ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ಮುಂದಿನ ತಿಂಗಳು ಅಕ್ಟೋಬರ್ನಲ್ಲಿ ಪೋಷಕರಾಗಿ ಬಡ್ತಿ ಪಡೆಯಲಿದ್ದಾರೆ. ಇದೀಗ ತುಂಬು ಗರ್ಭಿಣಿ ನಟಿ ಹರ್ಷಿಕಾ ಪೂಣಚ್ಚ ಅವರ ಸೀಮಂತ ಕಾರ್ಯಕ್ರಮ ನೆರವೇರಿದೆ. ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ ಈ ಕಾರ್ಯಕ್ರಮ ಆಯೋಜಿಸಿದ್ದರು ಅನ್ನೋದು ವಿಶೇಷ.
ನಟಿ ಹರ್ಷಿಕಾ ಪೂಣಚ್ಚ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಜೊತೆ ಜೊತೆಗೆ ಸಿನಿಮಾ ರಂಗದಲ್ಲಿ ಆತ್ಮೀಯ ಸ್ನೇಹಿತರನ್ನು ಹೊಂದಿದ್ದಾರೆ. ಸದ್ಯ ಮೊದಲ ಮಗುವಿನ ಆಗಮನದ ಖುಷಿಯಲ್ಲಿರುವ ತಾರಾ ದಂಪತಿಗೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ಸರ್ಪ್ರೈಸ್ ನೀಡಿದ್ದಾರೆ. ಗಣೇಶ್ ಆರ್ಆರ್ ನಗರದಲ್ಲಿರೋ ತಮ್ಮ ನಿವಾಸದಲ್ಲಿ ಹರ್ಷಿಕಾ ಅವರ ಬೇಬಿ ಶವರ್ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸಿನಿಮಾ ಇಂಡಸ್ಟ್ರಿಯ ಗೆಳೆಯರನ್ನು ಆಹ್ವಾನಿಸಿದ್ದರು.
ಈವೆಂಟ್ನಲ್ಲಿ ಆ್ಯಕ್ಷನ್ ಕ್ವೀನ್ ಮಾಲಾಶ್ರೀ, ಮಗಳು ಆರಾಧನಾ, ಶೃತಿ ಹಾಗೂ ಮಗಳು ಗೌರಿ, ಪ್ರಿಯಾಂಕಾ ಉಪೇಂದ್ರ, ಅನು ಪ್ರಭಾಕರ್, ರಘು ಮುಖರ್ಜಿ, ಶರಣ್ಯ, ನಿಕಿತಾ, ಅಮೂಲ್ಯ ಜಗದೀಶ್ ದಂಪತಿ, ದಿಶಾ ಹಾಗೂ ಡಾ.ಪ್ರೀತಿ ಸುಧಾಕರ್, ಶೀಲಾ ಯೋಗೀಶ್ವರ್ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಕಾಣಿಸಿಕೊಂಡರು.
ಶೀಘ್ರದಲ್ಲೇ ತಾಯಿಯಾಗಲಿರುವ ಹರ್ಷಿಕಾಗೆ ಉಡುಗೊರೆಗಳ ಸುರಿ ಮಳೆಯೇ ಬಂದಿದೆ. ಸಮಾರಂಭದಲ್ಲಿ ಹಿರಿಯರು ಕಿರಿಯರು ಎಲ್ಲರೂ ಒಟ್ಟಿಗೆ ಕುಣಿದು ಕುಪ್ಪಳಿಸಿ, ಹಾಡಿ ಖುಷಿ ಪಟ್ಟಿದ್ದು ವಿಶೇಷವಾಗಿತ್ತು. ಶೃತಿ ಅವರ ಮಗಳು ಗೌರಿ ಹರ್ಷಿಕಾ ಅವರಿಗಾಗಿ ಹಾಡಿ ಸರ್ಪ್ರೈಸ್ ನೀಡಿದ್ದಾರೆ.