ಬಿಗ್ ಬಾಸ್ ಮನೆಯೀಗ ಬಿಗ್ ಬಾಸ್ ರೆಸಾರ್ಟ್ ಆಗಿ ಪರಿವರ್ತನೆಯಾಗಿದೆ. ಒಂದು ತಂಡ ರೆಸಾರ್ಟ್ನ ಸಿಬ್ಬಂದಿಯಾಗಿ ಕೆಲಸ ಮಾಡಬೇಕಿದ್ದು, ಮತ್ತೊಂದು ತಂಡ ಅತಿಥಿಗಳಾಗಿ ಸೇವೆ ಮಾಡಬೇಕಿದೆ. ಈ ಆಟದಲ್ಲಿ ವೈಯಕ್ತಿಕ ಮನಸ್ತಾಪ, ಮುಯ್ಯಿಗೆ ಮುಯ್ಯಿ ವಿಚಾರಗಳು ಎದ್ದು ಕಾಣುತ್ತಿವೆ. ಸ್ಪರ್ಧಿಗಳ ಅಸಲಿ ವ್ಯಕ್ತಿತ್ವ ಅನಾವರಣಗೊಳ್ಳುತ್ತಿದೆ. ಇಂದಿನ ಸಂಚಿಕೆಯಲ್ಲಿ ಟಾಸ್ಕ್ನಲ್ಲಿ ಮಹತ್ವದ ತಿರುವು ಎದುರಾಗಲಿದ್ದು, ಸೇರಿಗೆ ಸವ್ವಾಸೇರು ಕೊಡಲು ರಜತ್ ಅವರ ತಂಡ ಸಜ್ಜಾಗಿದೆ.
''ಈಗ ಆಟ ಬದಲಾಗಿದೆ!'' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನಡಿ ಪ್ರೋಮೋ ರಿಲೀಸ್ ಆಗಿದೆ. ಈವರೆಗೆ ರೆಸಾರ್ಟ್ ಸಿಬ್ಬಂದಿ ಆದವರಿಂದು ಅತಿಥಿಗಳಾಗಿ ಬದಲಾಗಲಿದ್ದಾರೆ. ಕಳೆದ ಸಂಚಿಕೆಯಲ್ಲಿ ತಾವು ಸಿಬ್ಬಂದಿಯಾಗಿದ್ದ ಸಂದರ್ಭದಲ್ಲಿ ತಡೆದುಕೊಂಡಿದ್ದ ಆಕ್ರೋಶವನ್ನು ಇಂದಿನ ಸಂಚಿಕೆಯಲ್ಲಿ ತಮ್ಮದೇ ಆದ ರೀತಿಯಲ್ಲಿ ಹೊರಹಾಕಲಿದ್ದಾರೆ. ರಜತ್ ಅವರ ಅಬ್ಬರ ಕೊಂಚ ಹೆಚ್ಚೇ ಎನ್ನಬಹುದು. ಇದರ ಒಂದು ಸುಳಿವನ್ನು ಪ್ರೋಮೋದಲ್ಲಿ ನೋಡಬಹುದು.
ಕ್ಯಾಪ್ಟನ್ ಭವ್ಯಾ ಅವರ ತಂಡದಲ್ಲಿ ತ್ರಿವಿಕ್ರಮ್, ಧನರಾಜ್ ಆಚಾರ್, ರಜತ್ ಕಿಶನ್ ಹಾಗೂ ಮೋಕ್ಷಿತಾ ಅವರಿದ್ದಾರೆ. ಮತ್ತೊಂದು ತಂಡದ ನಾಯಕತ್ವವನ್ನು ಚೈತ್ರಾ ಕುಂದಾಪುರ ವಹಿಸಿದ್ದು, ಉಗ್ರಂ ಮಂಜು, ಗೌತಮಿ ಜಾಧವ್, ಹನುಮಂತು ಮತ್ತು ಐಶ್ವರ್ಯಾ ಅವರಿದ್ದಾರೆ. ಕಳೆದ ಸಂಚಿಕೆಯಲ್ಲಿ ಭವ್ಯಾ ಅವರ ತಂಡ ರೆಸಾರ್ಟ್ ಸಿಬ್ಬಂದಿಯಾಗಿ ಸೇವೆ ಒದಗಿಸಿದ್ದರೆ, ಅತಿಥಿಗಳಾಗಿ ಚೈತ್ರಾ ಕುಂದಾಪುರ ಟೀಮ್ ಮಸ್ತ್ ಮಜಾ ಮಾಡಿತ್ತು. ಟಾಸ್ಕ್ ಹೆಸರಲ್ಲಿ ಚೈತ್ರಾ ಕುಂದಾಪುರ ಅವರು ರಜತ್ ಅವರ ಬೆಂಡೆತ್ತಿದ್ದರು. ಇದೀಗ ರಜತ್ ಅವರ ಸರದಿ. ಯಾಕಂದ್ರೆ ಚೈತ್ರಾ ಕುಂದಾಪುರ ಅವರ ತಂಡವೀಗ ರೆಸಾರ್ಟ್ ಸಿಬ್ಬಂದಿಯಾಗಿ ಬದಲಾಗಲಿದ್ದಾರೆ.