ಭಾರತೀಯ ಸಿನಿಮಾಗಳಲ್ಲಿ ಪ್ರಾಣಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸಾಕುಪ್ರಾಣಿಗಳನ್ನು ಭಾರತೀಯರು ಬಹುವಾಗಿ ಪ್ರೀತಿಸುತ್ತಾರೆ. ಮಾನವರ ಜೀವನದಲ್ಲಿ ಪ್ರಾಣಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಇದೇ ಕಾನ್ಸೆಪ್ಟ್ನೊಂದಿಗೆ ಹಲವು ಚಲನಚಿತ್ರಗಳು ಮೂಡಿಬಂದಿವೆ. ಮ್ಯಾಚ್‌ಮೇಕರ್‌ಗಳ ಪಾತ್ರದಿಂದ ಹಿಡಿದು ಜೀವ ಉಳಿಸುವವರೆಗೆ ಮತ್ತು ಸೇಡು ತೀರಿಸಿಕೊಳ್ಳುವವರೆಗೆ, ಪ್ರಾಣಿಗಳು ತಮ್ಮ ವಿಶಿಷ್ಟ ಪಾತ್ರಗಳಿಂದಾಗಿ ಜನಮನ ಗೆದ್ದಿವೆ. ಪ್ರಾಣಿಗಳು ಮುಖ್ಯಭೂಮಿಕೆಯಲ್ಲಿ ನಟಿಸಿ, ಪ್ರೇಕ್ಷಕರ ಮೇಲೆ ಪ್ರಭಾವ ಬೀರಿರುವ ಐದು ಭಾರತೀಯ ಚಲನಚಿತ್ರಗಳ ಕುರಿತಾದ ಮಾಹಿತಿ ಇಲ್ಲಿದೆ..
777 ಚಾರ್ಲಿ: ಕಿರಣ್‌ರಾಜ್ ಕೆ ನಿರ್ದೇಶನದ '777 ಚಾರ್ಲಿ' ಒಂದು ಹೃದಯಸ್ಪರ್ಶಿ ಕಥೆ. ನಾಯಕ ಧರ್ಮನ ಪಾತ್ರವನ್ನು ರಕ್ಷಿತ್ ಶೆಟ್ಟಿ ನಿರ್ವಹಿಸಿದ್ದಾರೆ. ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದ ನಾಯಕನ ಜೀವನದಲ್ಲಿ ಚಾರ್ಲಿ ನಾಯಿಮರಿ ಪ್ರವೇಶಿಸುತ್ತದೆ. ಧರ್ಮನ ಜೀವನವನ್ನು ಸಂತೋಷ, ಉತ್ಸಾಹಭರಿತಗೊಳಿಸುವಲ್ಲಿ ಚಾರ್ಲಿ ಯಶಸ್ವಿಯಾಗುತ್ತದೆ. ಚಾರ್ಲಿ ಚಿತ್ರದ ಭಾವನಾತ್ಮಕ ತಿರುಳು. ಚಾರ್ಲಿ ಜೊತೆಗಿನ ಪ್ರಯಾಣದಲ್ಲಿ ಧರ್ಮ ಪ್ರೀತಿ, ಒಡನಾಟ ಮತ್ತು ಜೀವನದಲ್ಲಿ ಒಂದು ಉದ್ದೇಶ ಹೊಂದುವ ಬಗ್ಗೆ ಕಲಿಯುತ್ತಾನೆ. ಈ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿದೆ. ಸಂಗೀತ ಶೃಂಗೇರಿ, ರಾಜ್ ಬಿ ಶೆಟ್ಟಿ ಮತ್ತು ಬಾಬಿ ಸಿಂಹ ಕೂಡಾ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. '777 ಚಾರ್ಲಿ' ಮನುಷ್ಯ ಮತ್ತು ಶ್ವಾನದ ನಡುವಿನ ಅವಿನಾಭಾವ ಸಂಬಂಧಕ್ಕೆ ಸಂದ ಗೌರವ.
ಹಮ್ ಆಪ್ಕೆ ಹೈ ಕೌನ್ : ಸೂರಜ್ ಬರ್ಜತ್ಯ ನಿರ್ದೇಶನದ ಹಮ್ ಆಪ್ಕೆ ಹೈ ಕೌನ್ ಎಂಬ ಎವರ್ಗ್ರೀನ್ ಫ್ಯಾಮಿಲಿ ಡ್ರಾಮಾದಲ್ಲಿ ಟಫಿ ಎಂಬ ಮುದ್ದಾದ ಪೊಮೆರೇನಿಯನ್ ಶ್ವಾನ ಗಮನ ಸೆಳೆದಿತ್ತು. ಟಫಿ, ನಿಶಾ (ಮಾಧುರಿ ದೀಕ್ಷಿತ್) ಮತ್ತು ಪ್ರೇಮ್ (ಸಲ್ಮಾನ್ ಖಾನ್) ಅವರನ್ನು ಒಂದುಗೂಡಿಸುವ ಕ್ಷಣದಲ್ಲಿ ಕಾಣಿಸಿಕೊಂಡಿತ್ತು.
ಮಾ: ಈ ಚಿತ್ರದಲ್ಲಿ ಡಾಬಿ ಎಂಬ ಶ್ವಾನ ಪ್ರಮುಖ ಪಾತ್ರ ವಹಿಸಿದ್ದು, ಅದು ತನ್ನ ಧೈರ್ಯಕ್ಕೆ ಹೆಸರುವಾಸಿಯಾಗಿದೆ. ನಟಿ ಜಯಪ್ರದಾ ಕಥೆಯ ಅರ್ಧದಾರಿಯಲ್ಲೇ ಕೊನೆಯುಸಿರೆಳೆದು ಭೂತದ ರೂಪದಲ್ಲಿ ಪರದೆಗೆ ಹಿಂತಿರುಗುತ್ತಾಳೆ. ತನ್ನ ಪತಿ ಮತ್ತು ಮಗುವಿಗೆ ರಕ್ಷಕಳಾಗಬಹುದಾದರೂ, ಅಸಹಾಯಕಳಾಗುತ್ತಾಳೆ. ನಂತರ ಈ ಡಾಬಿಯ ಎಂಟ್ರಿ ಆಗುತ್ತದೆ. ಮೃತ ತಾಯಿ (ನಟಿ/ಭೂತ) ನ್ಯಾಯ ದಕ್ಕಿಸಿಕೊಳ್ಳಲು ಮತ್ತು ತನ್ನ ಸಾವಿಗೆ ಸೇಡು ತೀರಿಸಿಕೊಳ್ಳಲು ಡಾಬಿಯ ವಿಶೇಷ ಶಕ್ತಿ ಬಳಸಿಕೊಳ್ಳುತ್ತಾಳೆ. ಭೂತಗಳನ್ನು ನೋಡುವ ವಿಶೇಷ ಶಕ್ತಿ ಶ್ವಾನಗಳಿಗಿದೆ ಎಂಬ ವರದಿಗಳಿದ್ದು, ಡಾಬಿ ಇಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.