2022ರಲ್ಲಿ ಕೆಜಿಎಫ್ 2, ಕಾಂತಾರದಂತಹ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂದ ಗಮನ ಸೆಳೆದಿದ್ದ ಕನ್ನಡ ಸಿನಿವಲಯದಲ್ಲೀಗ ಸ್ಟಾರ್ ನಟರ ಸಿನಿಮಾಗಳಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ. ಚಿತ್ರಮಂದಿರಗಳಿಗೆ ಪ್ರೇಕ್ಷಕರ ಸಂಖ್ಯೆಯ ಕಡಿಮೆ ಆಗಿದೆ ಎಂಬ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.
ಹೊಸ ಪ್ರತಿಭೆಗಳು, ಕಂಟೆಂಟ್ ಜೊತೆಗೆ ಎಂಟರ್ಟೈನ್ಮೆಂಟ್ ಇದ್ದರೂ ಸಿನಿ ಪ್ರಿಯರು ಥಿಯೇಟರ್ ಕಡೆ ಮುಖ ಮಾಡುತ್ತಿಲ್ಲ ಅನ್ನೋ ವಿಚಾರ ಚಿತ್ರಮಂದಿರದ ಮಾಲೀಕರು, ನಿರ್ಮಾಪಕರಿಗೆ ತಲೆನೋವಾಗಿ ಪರಿಣಮಿಸಿದೆ. ಇಂಥ ಪರಿಸ್ಥಿಯಲ್ಲಿ ರಾಜ್ಯ ಸರ್ಕಾರ ಚಿತ್ರರಂಗದ ಕಲಾವಿದರು ಮತ್ತು ತಂತ್ರಜ್ಞರಿಗೆ ನೆರವಾಗುವ ಉದ್ದೇಶದೊಂದಿಗೆ ಸಿನಿಮಾ ಟಿಕೆಟ್ ಮತ್ತು ಒಟಿಟಿ ಸಬ್ ಸ್ಕ್ರಿಪ್ಷನ್ ಮೇಲೆ ಶೇ.2ರಷ್ಟು ಸೆಸ್ ವಿಧಿಸುವ ಮಸೂದೆಯನ್ನ ಜಾರಿಗೆ ತರುತ್ತಿದೆ. ಇದು ಸಿನಿಮಾ ನೋಡುವ ಪ್ರೇಕ್ಷಕರಿಗೆ ಹಾಗೂ ನಿರ್ಮಾಪಕರಿಗೆ ಹೊರೆಯಾಗಲಿದೆ ಎಂಬುದು ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷರ ಅಭಿಪ್ರಾಯ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ಎಂ ಸುರೇಶ್ ಮಾತನಾಡಿ, ಸಿನಿಮಾ ಟಿಕೆಟ್ ದರ ಹಾಗೂ ಓಟಿಟಿ ಸಬ್ಸ್ಕ್ರಿಪ್ಷನ್ ಮೇಲೆ ಶೇ. 2 ರಷ್ಟು ಸೆಸ್ ಅಂದ್ರೆ, ಹೆಚ್ಚುವರಿ ತೆರಿಗೆ ವಿಧಿಸುವುದರಿಂದ ಪ್ರೇಕ್ಷಕರು ಹಾಗೂ ನಿರ್ಮಾಪಕರಿಗೆ ನಷ್ಟ ಆಗುತ್ತದೆ ಎಂದು ಹೇಳಿದ್ದಾರೆ. ಹೆಚ್ಚುವರಿ ತೆರಿಗೆ ಸಿನಿಮಾ ವಿತರಕರಿಗೆ ಲಾಭ ಆಗುತ್ತದೆ, ನಿರ್ಮಾಪಕರಿಗೆ ನಷ್ಟ ಆಗಲಿದೆ. ಇದರ ಜೊತೆಗೆ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಸಿನಿಮಾಗಳು ಹೆಚ್ಚಾಗಿ ಬರುತ್ತಿಲ್ಲ. ಹೊಸಬರ ಕಥೆ ಚೆನ್ನಾಗಿದ್ದರೂ ಥಿಯೇಟರ್ ಕಡೆ ಜನ ಮುಖ ಮಾಡುತ್ತಿಲ್ಲ. ಹೀಗಾಗಿ ಸದ್ಯ ಚಿತ್ರರಂಗದ ಪರಿಸ್ಥಿತಿ ಚೆನ್ನಾಗಿಲ್ಲ. ಹಾಗಾಗಿ ಈ ಬಿಲ್ ಪುನರ್ ಪರಿಶೀಲನೆ ಮಾಡುವಂತೆ ಫಿಲ್ಮ್ ಚೇಂಬರ್ನಿಂದ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು.