ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಅಭಿನಯದ 'ಫೈಟರ್' ಇಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಂಡಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ಬಹುತೇಕ ಸಕಾರಾತ್ಮಕ ಸ್ಪಂದನೆ ಸ್ವೀಕರಿಸಿದೆ. ವಿಮರ್ಶಕರು ಮತ್ತು ವೀಕ್ಷಕರು ಸಕಾರಾತ್ಮಕ ವಿಮರ್ಶೆ ಒದಗಿಸುತ್ತಿದ್ದಾರೆ.
2023ರಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಪಠಾಣ್ ಸಿನಿಮಾ ಕೊಟ್ಟ ಸಿದ್ಧಾರ್ಥ್ ಆನಂದ್ ಅವರ 2024 ಬಹುನಿರೀಕ್ಷಿತ ಚಿತ್ರ ಅಂತಿಮವಾಗಿ ಇಂದು ತೆರೆಗಪ್ಪಳಿಸಿದೆ. ಇದೇ ಮೊದಲ ಬಾರಿಗೆ ಬಹುಬೇಡಿಕೆ ಕಲಾವಿದರಾದ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ತೆರೆ ಹಂಚಿಕೊಂಡಿದ್ದಾರೆ. ಅಲ್ಲದೇ ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್ ಅವರಂತಹ ಹೆಸರಾಂತ ನಟರೂ ನಟಿಸಿದ್ದಾರೆ. ಸಿನಿಮಾ ಕಥೆ ಮತ್ತು ಕಲಾವಿದರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು, ಸಿನಿಮಾ ಉತ್ಸಾಹಿಗಳು #FighterReview ಎಂಬ ಹ್ಯಾಶ್ಟ್ಯಾಗ್ ಅಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನೆಟಿಜನ್‌ಗಳು ಸಿನಿಮಾವನ್ನು 'ಬ್ಲಾಕ್‌ಬಸ್ಟರ್' ಎಂದು ವರ್ಣಿಸಿದ್ದಾರೆ. ಚಿತ್ರ ದೊಡ್ಡ ಯಶಸ್ಸು ಕಾಣಲಿದೆ ಎಂದು ಬಲವಾಗಿ ನಂಬಿದ್ದಾರೆ. ಫೈಟರ್ ಚಿತ್ರ ವಾರ್ ಮತ್ತು ಪಠಾಣ್ ನಂತರ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಸತತ ಮೂರನೇ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಲಿದೆ ಎಂಬರ್ಥದ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಎಕ್ಸ್ ವಿಮರ್ಶೆ ಬಹುತೇಕ ಪಾಸಿಟಿವ್ ಆಗಿ ಬಂದಿದೆ.
ನೆಟ್ಟಿಗರು ಹೃತಿಕ್ ಮತ್ತು ದೀಪಿಕಾ ಅವರ ಪವರ್ಫುಲ್ ಅಭಿನಯಕ್ಕೆ ಬಹಳ ಮೆಚ್ಚುಗೆ ಸೂಚಿಸಿದ್ದಾರೆ. ಆನ್ - ಸ್ಕ್ರೀನ್ ಸೀನ್ಸ್ ಅನ್ನು ಶ್ಲಾಘಿಸಿದ್ದಾರೆ. ಚಿತ್ರದ ನಿರೂಪಣೆ, ರೋಮಾಂಚಕ ಸಾಹಸ ದೃಶ್ಯಗಳು, ಕಲಾವಿದರ ನಟನೆ ಸೇರಿ ಹಲವಾರು ಪ್ರಮುಖ ಅಂಶಗಳನ್ನು ತಮ್ಮ ವಿಮರ್ಶೆಯಲ್ಲಿ ಉಲ್ಲೇಖಿಸಿದ್ದಾರೆ.
ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿ, "ಫೈಟರ್ ಒಂದು ಮಾಸ್ಟರ್ಪೀಸ್ ಮತ್ತು ಮೆಗಾ ಬ್ಲಾಕ್‌ಬಸ್ಟರ್ ಫಿಲ್ಮ್. ಆ್ಯಕ್ಷನ್, ಡ್ರಾಮಾ, ಎಮೋಶನ್, ದೇಶಭಕ್ತಿಯಿಂದ ತುಂಬಿದೆ. ಹೃತಿಕ್ ಅಭಿನಯದಿಂದ ಹಿಡಿದು ನಿರ್ದೇಶನದವರೆಗೆ ಎಲ್ಲವೂ ಬಹಳ ಚೆನ್ನಾಗಿದೆ. ಬಾಕ್ಸ್ ಆಫೀಸ್ನಲ್ಲಿ ಬಿರುಗಾಳಿ ಎಬ್ಬಿಸಲಿದೆ. ರೇಟಿಂಗ್ - 5/5" ಎಂದು ಬರೆದುಕೊಂಡಿದ್ದಾರೆ.