ಹೈದರಾಬಾದ್: ಸಿದ್ದಾರ್ಥ್ ಆನಂದ್ ನಿರ್ದೇಶನದ 'ಫೈಟರ್' ಸಿನಿಮಾದ ಎರಡನೇ ದಿನದ ಬುಕ್ಕಿಂಗ್ನಲ್ಲಿ 1.84 ಲಕ್ಷ ಟಿಕೆಟ್ ಮಾರಾಟವಾಗಿದ್ದು, 5.94 ಕೋಟಿ ಗಳಿಕೆ ಮಾಡಿದೆ. ಗಣರಾಜ್ಯೋತ್ಸವಕ್ಕೂ ಮುನ್ನಾ ದಿನ ಅಂದರೆ ಇಂದು ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಜನವರಿ 26ರಿಂದ ದೀರ್ಘ ವಾರಾಂತ್ಯ ಆರಂಭವಾಗಲಿದ್ದು, ಇದರಿಂದ ಟಿಕೆಟ್ ಮಾರಾಟ ಪ್ರಕ್ರಿಯೆ ಕೂಡ ಹೆಚ್ಚಾಗಿದೆ.
ನಟ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ನಟನೆಯಲ್ಲಿ ಮೂಡಿ ಬಂದಿರುವ ಈ ವರ್ಷದ ಸಖತ್ ಆ್ಯಕ್ಷನ್ ಚಿತ್ರ ಇದಾಗಿದೆ. ಆನಂದ್ ಅವರ ಈ ಹಿಂದಿನ 'ವಾರ್' ಮತ್ತು 'ಪಠಾಣ್' ಚಿತ್ರಗಳಿಗಿಂತ ಈ ಚಿತ್ರ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ. ದೊಡ್ಡ ತಾರಾ ಬಳಗ ಮತ್ತು ನಿರ್ದೇಶನದ ನಡುವೆಯೂ ಚಿತ್ರ ಸಿನಿ ಪ್ರೇಕ್ಷಕರ ವರ್ಗದಲ್ಲಿ ಹೇಳಿಕೊಳ್ಳುವಂತಹ ಉತ್ಸಾಹ ಕಂಡು ಬಂದಿಲ್ಲ ಎಂಬ ಮಾತು ಕೂಡ ಕೇಳಿ ಬಂದಿದೆ.
ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಚಿತ್ರ ಬಿಡುಗಡೆಯಾದ ಮೊದಲ ದಿನ ಅಂದರೆ ಜನವರಿ 25ರಂದು ಚಿತ್ರವೂ ಕೇವಲ 1,85,547 ಲಕ್ಷ ಸೀಟುಗಳು ಭರ್ತಿಯಾಗಿದ್ದು, 5.94 ಕೋಟಿಯನ್ನು ಎರಡು ದಿನದ ಅಡ್ವಾನ್ಸ್ ಬುಕ್ಕಿಂಗ್ ಮೂಲಕ ಪಡೆದಿದೆ. ಚಿತ್ರವೂ 3ಡಿಯಲ್ಲಿ ಮೂಡಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಬುಕ್ಕಿಂಗ್ ಕಲೆಕ್ಷನ್ ಕೂಡ ಉತ್ತಮವಾಗಿದೆ. ಆದರೆ, ಅಂತಿಮವಾಗಿ ಚಿತ್ರವು ಗುರುವಾರ ಸಿನಿಮಾದ ವಿಶ್ಲೇಷಣೆ ಬಳಿಕ ಹೇಗೆ ಪ್ರದರ್ಶನ ಕಾಣಲಿದೆ ಎಂಬುದು ತಿಳಿಯಲಿದೆ.