ದಕ್ಷಿಣ ಚಿತ್ರರಂಗದ ಪ್ರಸಿದ್ಧ ಚಲನಚಿತ್ರ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ನಿರ್ಮಾಣದ 'ಕಲ್ಕಿ 2898 ಎಡಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾದ ಸಾಹಸ ದೃಶ್ಯಗಳಿಗೆ ಪ್ರೇಕ್ಷಕ ವರ್ಗ ಮೂಕವಿಸ್ಮಿತವಾಗಿದೆ. ನಾಗ್ ಅಶ್ವಿನ್ ನಿರ್ದೇಶನ ಶೈಲಿಗೂ ಬಹುಪರಾಕ್ ಸಿಕ್ಕಿದೆ.
ಅಭಿಮಾನಿಗಳು ಪ್ರಭಾಸ್ ಹೊಸ ಅವತಾರಕ್ಕೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. 'ಸಲಾರ್'ಗೂ ಮುನ್ನ ಸರಣಿ ಹಿನ್ನಡೆ ಕಂಡಿದ್ದ ನಟನಿಗೆ ಕಲ್ಕಿ ದೊಡ್ಡ ಯಶಸ್ಸು ತಂದುಕೊಟ್ಟಿದೆ. ಇದರೊಂದಿಗೆ ತಮ್ಮ 'ಪ್ಯಾನ್ ಇಂಡಿಯಾ ಸ್ಟಾರ್' ಎಂಬ ಜನಪ್ರಿಯತೆಯನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ ಪ್ರಭಾಸ್. 'ಕಲ್ಕಿ' ಅಂಥದ್ದೊಂದು ದೊಡ್ಡ ಗೆಲುವನ್ನು ನಟನಿಗೆ ಉಡುಗೊರೆಯಾಗಿ ನೀಡಿದೆ.
ಫ್ಯಾಂಟಸಿ ಸಿನಿಮಾಗಳ ಮೂಲಕ, ಕಣ್ಣಿಗೆ ಅಚ್ಚರಿ ಎನಿಸುವ ದೃಶ್ಯಾವಳಿಗಳನ್ನು ನೋಡುಗರಿಗೆ ನೀಡಿ ಸಿನಿರಸಿಕರನ್ನು ಪ್ರಭಾಸ್ ತಂಡ ರಂಜಿಸುತ್ತಿದೆ. ಇದರೊಂದಿಗೆ ತಮ್ಮ ಗಮನಾರ್ಹ ಆನ್-ಸ್ಕ್ರೀನ್ ಪಾತ್ರದಿಂದಲೂ ಪ್ರಭಾಸ್ ಜಾಗತಿಕ ಅಭಿಮಾನಿಗಳನ್ನೂ ತನ್ನೆಡೆ ಸೆಳೆದುಕೊಳ್ಳುತ್ತಿದ್ದಾರೆ.
ಪ್ರಭಾಸ್ ಅವರ ಕಟ್ಟಾ ಅಭಿಮಾನಿಗಳ ತಂಡವೊಂದು ಇತ್ತೀಚೆಗೆ 'ಕಲ್ಕಿ' ಸಿನಿಮಾ ವೀಕ್ಷಿಸಲು ಜಪಾನ್‌ನಿಂದ ಹೈದರಾಬಾದ್‌ಗೆ ಆಗಮಿಸಿತ್ತು ಎಂಬುದು ಇನ್ನೂ ವಿಶೇಷ. ಚಿತ್ರದ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್, ಹೈದರಾಬಾದ್‌ನ ಪ್ರಸಾದ್ಸ್ ಮಲ್ಟಿಪ್ಲೆಕ್ಸ್‌ನಲ್ಲಿ ಐಕಾನಿಕ್ 'ರೆಬೆಲ್' ಟ್ರಕ್ ಪಕ್ಕದಲ್ಲಿ ನಿಂತಿರುವ ಮೂವರು ಜಪಾನಿ ಅಭಿಮಾನಿಗಳ ಫೋಟೋಗಳನ್ನು ಹಂಚಿಕೊಂಡಿದೆ. ಪ್ರಭಾಸ್ ಪಾತ್ರದ ಭೈರವ ಮತ್ತು ಬುಜ್ಜಿ ವಾಹನದ ಫೋಟೋ ಇರುವ ವಿಶೇಷ ಬಾವುಟ ಹಿಡಿದು ಕಲ್ಕಿ ಬಿಡುಗಡೆಗೆ ಅಭಿನಂದನೆಗಳು ಎಂದು ಜಪಾನ್ ಫ್ಯಾನ್ಸ್ ಖುಷಿ ವ್ಯಕ್ತಪಡಿಸಿದ್ದಾರೆ.