ಬಾಲಿವುಡ್ ಐಕಾನ್ ಐಶ್ವರ್ಯಾ ರೈ ಬಚ್ಚನ್ ಸಿನಿಮಾಗಳಿಂದ ದೂರವುಳಿದಿದ್ದರೂ, ಜನಮಾನಸದಲ್ಲಿ ಭದ್ರ ಸ್ಥಾನ ಹೊಂದಿದ್ದಾರೆ. ಜಾಗತಿಕ ವೇದಿಕೆಗಳಲ್ಲಿ ಹೆಜ್ಜೆ ಹಾಕುವ ಮೂಲಕ ತಮ್ಮ ಉನ್ನತ ಸ್ಥಾನವನ್ನು ಕಾಪಾಡಿಕೊಂಡಿದ್ದಾರೆ. ಇಂಟರ್ನ್ಯಾಷನಲ್ ಈವೆಂಟ್ಸ್, ಅಪರೂಪಕ್ಕೆ ಸೋಷಿಯಲ್ ಮೀಡಿಯಾ ಪೋಸ್ಟ್, ಏರ್ಪೋರ್ಟ್ ವಿಡಿಯೋ ಎಂದು ಸದಾ ಸುದ್ದಿಯಲ್ಲಿರುವ ನಟಿ ವಿಚ್ಛೇದನ ವದಂತಿಗಳಿಂದಲೂ ಚರ್ಚೆಯ ವಿಷಯವಾಗಿದ್ದಾರೆ.
ಇತ್ತೀಚೆಗೆ ದುಬೈನಲ್ಲಿ ನಡೆದ ಗ್ಲೋಬಲ್ ವುಮೆನ್ಸ್ ಫೋರಮ್‌ನಲ್ಲಿ ಭಾಗವಹಿಸಿದ್ದ ಐಶ್ವರ್ಯಾ ರೈ ಬಚ್ಚನ್, ಪ್ರಭಾವಿ ಮಹಿಳೆಯರ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಈವೆಂಟ್‌ನ ಕೆಲ ವಿಡಿಯೋಗಳು ಶೇರ್ ಅಗಿವೆ. ಜೊತೆಗೆ, ದುಬೈನಿಂದ ಮುಂಬೈಗೆ ಆಗಮಿಸಿದ ನಂತರ ಏರ್ಪೋರ್ಟ್ ವಿಡಿಯೋಗಳೂ ಕೂಡಾ ವೈರಲ್ ಆಗಿವೆ. ಎಂದಿನಂತೆ ಮುಂಬೈ ಏರ್ಪೋರ್ಟ್ನಲ್ಲಿದ್ದ ಪಾಪರಾಜಿಗಳು ಮಾಜಿ ವಿಶ್ವಸುಂದರಿಯ ವಿಡಿಯೋ ಹಂಚಿಕೊಂಡಿದ್ದು, ವ್ಯಾಪಕವಾಗಿ ವೈರಲ್ ಆಗಿವೆ. ಇದರ ಬೆನ್ನಲ್ಲೇ ಐಶ್ ಮೊಬೈಲ್ ವಾಲ್ಪೇಪರ್ನಲ್ಲಿದು ಏನು ಎಂಬುದನ್ನು ನೆಟ್ಟಿಗರು ತಿಳಿಯಲು ಯತ್ನಿಸಿದ್ದಾರೆ.
ಮೊಬೈಲ್ ವಾಲ್ಪೇಪರ್ನಲ್ಲಿರೋದೇನು?ಬ್ಲ್ಯಾಕ್ ಔಟ್ಫಿಟ್ನಲ್ಲಿ ಬಹಳ ಸುಂದರವಾಗಿ ಕಾಣಿಸಿಕೊಂಡ ಬಾಲಿವುಡ್ ನಟಿ ಕೈಯಲ್ಲಿ ಒಂದು ಬ್ಯಾಗ್ ಮತ್ತು ಮೊಬೈಲ್ ಹಿಡಿದಿದ್ದರು. ಮೊಬೈಲ್ ಸ್ಕ್ರೀನ್ ಆನ್ ಆಗಿತ್ತು. ವಾಲ್ಪೇಪರ್ನಲ್ಲಿರೋದೇನು ಎಂಬುದನ್ನು ತಿಳಿಯಲು ನೆಟ್ಟಿಗರು ವಿಡಿಯೋ ಝೂಮ್ ಮಾಡಿದ್ದಾರೆ. ಕೆಲವರು ಇದು ಮಾವ, ಬಾಲಿವುಡ್ ದಂತಕಥೆ ಅಮಿತಾಭ್ ಬಚ್ಚನ್ ಎಂದೇ ಭಾವಿಸಿದ್ದಾರೆ. ಅಭಿಷೇಕ್ ಬಚ್ಚನ್ ಅವರಿಂದ ಐಶ್ವರ್ಯಾ ವಿಚ್ಛೇದನ ಪಡೆಯಲಿದ್ದಾರಾ ಎಂಬ ವದಂತಿ ಜೋರಾಗೇ ಹಬ್ಬಿರುವ ಈ ಹೊತ್ತಲ್ಲಿ, ವಾಲ್ಪೇಪರ್ನಲ್ಲಿರೋದು ಅಮಿತಾಭ್ ಬಚ್ಚನ್ ಎಂದೇ ಭಾವಿಸಿದ ಹಲವರು ಕುಟುಂಬದಲ್ಲಿ ಏನೂ ತೊಂದರೆ ಇಲ್ಲ ಎಂದು ನಿರಾಳರಾದರು. ಆದರೆ ವಾಲ್ಪೇಪರ್ನಲ್ಲಿರೋದು ಅಮಿತಾಭ್ ಬಚ್ಚನ್ ಅಲ್ಲ. ಬದಲಾಗಿ, ಮುದ್ದಿನ ಮಗಳು ಆರಾಧ್ಯ.