ಭಾರತೀಯ ಚಿತ್ರರಂಗದ ಹಿರಿಯ ತಾರಾ ದಂಪತಿ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಅವರ ಪುತ್ರಿ ಇಶಾ ಡಿಯೋಲ್ ಅವರು ವಿಚ್ಛೇದನ ವರದಿಗಳಿಂದ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಡಿವೋರ್ಸ್ ನ್ಯೂಸ್ ಹರಿದಾಡುತ್ತಿದೆ.
ಉದ್ಯಮಿ ಭರತ್ ತಖ್ತಾನಿ ಅವರೊಂದಿಗೆ ಕೆಲ ಕಾಲ ಡೇಟಿಂಗ್ ನಡೆಸಿದ ಇಶಾ ಡಿಯೋಲ್, 2012 ರ ಜೂನ್ 29ರಂದು ಹಸೆಮಣೆ ಏರಿದರು. ಇಶಾ ಮತ್ತು ಭರತ್ ಮುಂಬೈನ ಇಸ್ಕಾನ್ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದರು. ಈ ದಂಪತಿ ರಾಧ್ಯ ಮತ್ತು ಮಿರಾಯಾ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದಾರೆ. ಇಶಾ ಮತ್ತು ಭರತ್ ತಮ್ಮ 11 ವರ್ಷಗಳ ದಾಂಪತ್ಯ ಜೀವನ ಕೊನೆಗೊಳಿಸಲಿದ್ದಾರೆ.
ಜಂಟಿ ಹೇಳಿಕೆಯಲ್ಲಿ, ಇಶಾ ಡಿಯೋಲ್ ಮತ್ತು ಭರತ್ ತಖ್ತಾನಿ ತಾವು ದೂರವಾಗಲು ನಿರ್ಧರಿಸಿರುವುದಾಗಿ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ. "ನಾವು ಪರಸ್ಪರ ಮತ್ತು ಸೌಹಾರ್ದಯುತವಾಗಿ ಬೇರ್ಪಡಲು ನಿರ್ಧರಿಸಿದ್ದೇವೆ. ನಮ್ಮ ಜೀವನದಲ್ಲಿ ಈ ಬದಲಾವಣೆ ಮಾಡಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ನಮ್ಮ ಇಬ್ಬರು ಮಕ್ಕಳ ಹಿತಾಸಕ್ತಿ ಮತ್ತು ಯೋಗಕ್ಷೇಮವು ನಮ್ಮ ಪ್ರಮುಖ ಆದ್ಯತೆ ಆಗಿದೆ. ನಮ್ಮ ಗೌಪ್ಯತೆ ಗೌರವಿಸಿದರೆ ನಾವು ಅದನ್ನು ಪ್ರಶಂಸಿಸುತ್ತೇವೆ" ಎಂದು ತಿಳಿಸಿದ್ದಾರೆಂದು ವರದಿಯಾಗಿದೆ.
ಈ ಹಿಂದೆ ಸಂದರ್ಶನವೊಂದರಲ್ಲಿ ನಟಿ ಇಶಾ ಡಿಯೋಲ್ ತಮ್ಮ ಲವ್ಸ್ಟೋರಿ ಬಗ್ಗೆ ಮಾತನಾಡಿದ್ದರು. "ನಾನು ಜಮ್ನಾಬಾಯಿ ನರ್ಸೀ ಶಾಲೆಯಲ್ಲಿದ್ದೆ ಮತ್ತು ಭರತ್ ಬಾಂದ್ರಾದ ಲರ್ನರ್ಸ್ ಅಕಾಡೆಮಿಯಲ್ಲಿದ್ದರು. ಅದು ಬಾಂದ್ರಾದ ಗುಡ್ ಲುಕಿಂಗ್ ಬಾಯ್ಸ್ ಹೊಂದಿದ್ದ ಕೆಲವೇ ಕೆಲವು ಶಾಲೆಗಳಲ್ಲಿ ಒಂದಾಗಿತ್ತು. ನನ್ನ ಶಾಲೆಯಲ್ಲಿ ನಡೆದ ಇಂಟರ್ ಸ್ಕೂಲ್ ಕಾಂಪಿಟೇಶನ್ನಲ್ಲಿ ನಾವು ಪರಿಚಿತವಾದೆವು'' ಎಂದು ತಿಳಿಸಿದ್ದರು. ಅಲ್ಲದೇ, ತಮ್ಮ ಫೋನ್ ನಂಬರ್ ಅನ್ನು ಟಿಶ್ಯೂ ಪೀಸ್ ಮೂಲಕ ಅವರಿಗೆ ರವಾನಿಸಿದ್ದೆ ಎಂಬುದನ್ನೂ ನಟಿ ಬಹಿರಂಗಪಡಿಸಿದ್ದಾರೆ.