ಬಹುಭಾಷೆಯ ಸಿನಿಮಾಗಳು ಕನ್ನಡದಲ್ಲಿ ಬಿಡುಗಡೆ ಆಗುವ ಟ್ರೆಂಡ್ ಹೆಚ್ಚಾಗುತ್ತಿದೆ. ಕಳೆದ ತಿಂಗಳು ಮಲೆಯಾಳಂ ಚಿತ್ರರಂಗದಲ್ಲಿ ಬಿಡುಗಡೆಯಾದ 'ಪಣಿ' ಸಿನಿಮಾ ಈಗ ಕನ್ನಡಕ್ಕೆ ಡಬ್ ಆಗಿ ಬಿಡುಗಡೆ ಆಗುತ್ತಿದೆ. ಮಲೆಯಾಳಂ ನಟ ಜೋಜು ಜಾರ್ಜ್ ಅಭಿನಯಿಸಿ ಮತ್ತು ನಿರ್ದೇಶಿಸಿದ್ದ ಪಣಿ ಚಿತ್ರದ ಪ್ರಚಾರಕ್ಕಾಗಿ ಜೋಜು ಜಾರ್ಜ್ ಹಾಗೂ ಚಿತ್ರದ ನಟಿ ಅಭಿನಯ ಸೇರಿದಂತೆ ಇಡೀ ತಂಡ ಬೆಂಗಳೂರಿಗೆ ಬಂದಿತ್ತು.
ಸದ್ಯ ವಿಶ್ವಾದ್ಯಂತ ಗಮನ ಸೆಳೆದಿರುವ ಹೊಂಬಾಳೆ ಫಿಲ್ಮ್ಸ್ ಈ ಪಣಿ ಚಿತ್ರವನ್ನು ರಾಜ್ಯಾದ್ಯಂತ ಕನ್ನಡದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಚಿತ್ರತಂಡದವರು ಪತ್ರಿಕಾಗೋಷ್ಠಿ ಆಯೋಜಿಸಿ ಹಲವು ವಿಷಯಗಳನ್ನು ಹಂಚಿಕೊಂಡರು.
ಮೊದಲು ಮಾತನಾಡಿದ ನಟ - ನಿರ್ದೇಶಕ ಜೋಜು ಜಾರ್ಜ್, ಕಳೆದ 30 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಹಲವು ಚಿತ್ರಗಳಲ್ಲಿ ನಟಿಸಿದ್ದೇನೆ. ಇದು ನನ್ನ ನಿರ್ದೇಶನದ ಚೊಚ್ಚಲ ಚಿತ್ರ. ಈ ಚಿತ್ರವು ಕಳೆದ ತಿಂಗಳು ಮಲಯಾಳಂನಲ್ಲಿ ಬಿಡುಗಡೆಯಾಗಿದೆ. ಇದೀಗ ಕನ್ನಡಕ್ಕೆ ಡಬ್ ಆಗಿ ನವೆಂಬರ್ 29ರಂದು ಕರ್ನಾಟಕದಲ್ಲಿ ಬಿಡುಗಡೆಯಾಗುತ್ತಿದೆ. ಹೊಂಬಾಳೆ ಫಿಲ್ಮ್ಸ್ ಕನ್ನಡಕ್ಕೆ ಡಬ್ ಆಗಿರುವ ಈ ಸಿನಿಮಾವನ್ನು ಬಿಡುಗಡೆ ಮಾಡುತ್ತಿದೆ. ಇದೊಂದು ಮಾಸ್ ಮತ್ತು ಕಮರ್ಷಿಯಲ್ ಚಿತ್ರ. ಕೇರಳದಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದೆ. ಸೇಡಿನ ಕಥೆಯಾದ್ದರಿಂದ, ಎಲ್ಲ ಕಡೆ ಸಲ್ಲುತ್ತದೆ ಎಂಬ ನಂಬಿಕೆ ಇದೆ. ಕನ್ನಡದಲ್ಲೂ ಪ್ರೇಕ್ಷಕರು ಚೆನ್ನಾಗಿ ಸ್ವೀಕರಿಸುತ್ತಾರೆ ಎಂಬುದು ನಮ್ಮ ವಿಸ್ವಾಸ. ಇದೊಂದು ಕಾಲ್ಪನಿಕ ಕಥೆಯಾಗಿದ್ದರೂ ಎರಡು ವರ್ಷಗಳ ಕಾಲ ಚರ್ಚೆ ನಡೆಸಿ ಚಿತ್ರಕಥೆ ಮಾಡಿದ್ದೇವೆ. ಈ ಚಿತ್ರದಲ್ಲಿ ಸಾಕಷ್ಟು ಹೊಸಬರಿದ್ದಾರೆ. ಇದೊಂದು ಸರಳ ಕಥೆಯಾಗಿದ್ದು, ಅದನ್ನು ನೈಜವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಮಲಯಾಳಂನಲ್ಲಿ "ಪಣಿ" ಎಂದರೆ ಕೆಲಸ ಎಂದರ್ಥ. ಈ ಹಿಂದೆ ನನ್ನ ಹಲವು ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆಯಾಗಿ, ಯಶಸ್ವಿಯಾಗಿದೆ. ಈ ಚಿತ್ರ ಕೂಡ ಯಶಸ್ವಿಯಾಗಲಿದೆ ಎಂಬ ನಂಬಿಕೆ ಇದೆ ಎಂದರು.
ಈ ಹಿಂದೆ ಕನ್ನಡದಲ್ಲಿ ಹುಡುಗ್ರು, ಕಿಚ್ಚು ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ನಟಿ ಅಭಿನಯ ಮಾತನಾಡಿ, ಬಹಳ ದಿನಗಳ ನಂತರ ಬೆಂಗಳೂರಿಗೆ ಬಂದಿದ್ದೇನೆ. ನಾನು ಜೋಜು ಜಾರ್ಜ್ ಅವರ ಅಭಿಮಾನಿ. ಅವರ ಜೊತೆಗೆ ನಟಿಸಬಹುದು ಎಂದು ಊಹಿಸಿರಲಿಲ್ಲ. ಈ ಚಿತ್ರದಲ್ಲಿ ನನಗೆ ಅವಕಾಶ ನೀಡಿದ್ದಕ್ಕೆ ನಾನು ಆಭಾರಿ. ಚಿತ್ರದಲ್ಲಿ ನಾನು ಜೋಜು ಅವರ ಪತ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಕಳೆದ ಕೆಲ ವರ್ಷಗಳಲ್ಲಿ ತೆಲುಗು, ತಮಿಳು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಕನ್ನಡದಲ್ಲಿ ನಟಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಸಿನಿಮಾಗೆ ಯಾವುದೇ ಭಾಷೆಯ ಗಡಿ ಇಲ್ಲ. ಮುಂದೆ ಇಲ್ಲಿ ಒಳ್ಳೆಯ ಅವಕಾಶ ಸಿಕ್ಕರೆ ಖಂಡಿತಾ ನಟಿಸುತ್ತೇನೆ ಎಂದರು.
ಇದನ್ನೂ ಓದಿ: 'ತಪ್ಪು ಇನ್ನೊಮ್ಮೆಯಾದ್ರೂ ಮನೆಯಿಂದ ಹೊರಕಳುಹಿಸುತ್ತೀವಿ': ರಜತ್ಗೆ ಸುದೀಪ್ ಎಚ್ಚರಿಕೆ
ಈ ಸುಂದರ ವೇದಿಕೆಯಲ್ಲಿ ಸಾಗರ್ ಸೂರ್ಯ, ಜುನೈಜ್, ಬಾಬ್ಬಿ ಕುರಿಯನ್, ಅಭಯಾ ಹಿರಣ್ಮಯಿ, ರಂಜಿತ್ ವೇಲಾಯುಧನ್ ಸೇರಿದಂತೆ ಕೆಲ ಕಲಾವಿದರ ಜೊತೆಗೆ ಪಣಿ ಚಿತ್ರತಂಡದ ತಂತ್ರಜ್ಞನರು ಉಪಸ್ಥಿತರಿದ್ದರು. ಈ ಚಿತ್ರವು ಕನ್ನಡಕ್ಕೆ ಡಬ್ ಆಗುತ್ತಿರುವ ಸಂಭ್ರಮ ಹಂಚಿಕೊಂಡರು. ಚಿತ್ರವು ಕೇರಳದಲ್ಲಿ ಯಶಸ್ವಿಯಾದಂತೆ, ಕನ್ನಡದಲ್ಲೂ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಅಲ್ಲು ಅರ್ಜುನ್ ಜೊತೆ ಸೊಂಟ ಬಳುಕಿಸಿದ ಶ್ರೀಲೀಲಾ: 'ಕಿಸ್ಸಿಕ್' ಪ್ರೋಮೋ ನೋಡಿದ್ರಾ?
ಹೊಂಬಾಳೆ ಫಿಲ್ಮ್ಸ್ ವತಿಯಿಂದ ರಾಜೇಶ್ ಮಾತನಾಡಿ, ಈ ಸಿನಿಮಾದ ಕಥೆ ಚೆನ್ನಾಗಿದೆ. ಈ ಚಿತ್ರ ಕನ್ನಡ ಪ್ರೇಕ್ಷಕರಿಗೆ ಇಷ್ಟ ಆಗಲಿದೆ. ನವೆಂಬರ್ 29ರಂದು ಈ ಚಿತ್ರ ಕರ್ನಾಟಕದಲ್ಲಿ 30ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದರು.