ಕರ್ನಾಟಕ

karnataka

ETV Bharat / entertainment

ಪವನ್ ಕಲ್ಯಾಣ್ ಅಭಿನಯದ 'OG' ಚಿತ್ರದಿಂದ ಇಮ್ರಾನ್ ಹಶ್ಮಿ ಫಸ್ಟ್ ಲುಕ್​ ರಿಲೀಸ್ - Emraan Hashmi - EMRAAN HASHMI

ಪವನ್ ಕಲ್ಯಾಣ್ ಅಭಿನಯದ ಮುಂಬರುವ ಬಹುನಿರೀಕ್ಷಿತ ಚಿತ್ರ 'OG'ನಲ್ಲಿ ಬಾಲಿವುಡ್​​ ನಟ ಇಮ್ರಾನ್ ಹಶ್ಮಿ 'OMI BHAU' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇಂದು ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಂಡಿದೆ.

Emraan Hashmi poster
ಇಮ್ರಾನ್ ಹಶ್ಮಿ ಫಸ್ಟ್ ಲುಕ್

By ETV Bharat Karnataka Team

Published : Mar 24, 2024, 8:04 PM IST

ಬಾಲಿವುಡ್ ನಟ ಇಮ್ರಾನ್ ಹಶ್ಮಿ, ಸೌತ್​ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ 'ಓಜಿ' (OG) ಚಿತ್ರದ ಮೂಲಕ ದಕ್ಷಿಣ ಚಿತ್ರರಂಗ ಪ್ರವೇಶಿಸಲು ಸಜ್ಜಾಗಿದ್ದಾರೆ. ಇಂದು ನಟ 45ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆ, ನಿರ್ಮಾಪಕರು ಚಿತ್ರದಿಂದ ಇಮ್ರಾನ್ ಅವರ ಮೊದಲ ನೋಟವನ್ನು ಅನಾವರಣಗೊಳಿಸಿದ್ದಾರೆ. ಹಲವು ಹಿಂದಿ ಚಿತ್ರಗಳ ಮೂಲಕ ಜನಪ್ರಿಯರಾಗಿರುವ ಹಶ್ಮಿ, ತೆಲುಗು ಚೊಚ್ಚಲ ಚಿತ್ರದಲ್ಲಿ ಪವನ್​​ ಕಲ್ಯಾಣ್ ಎದುರು ಮುಖಾಮುಖಿಯಾಗಲಿದ್ದಾರೆ.

ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡು ಚಿತ್ರ ತಯಾರಕರು, "ಹ್ಯಾಪಿ ಬರ್ತ್‌ಡೇ ಡೆಡ್ಲಿಯೆಸ್ಟ್ OMI BHAU ಇಮ್ರಾನ್​ ಹಶ್ಮಿ" ಎಂದು ಬರೆದುಕೊಂಡಿದ್ದಾರೆ. ಪೋಸ್ಟರ್‌ನಲ್ಲಿ, ಇಮ್ರಾನ್​ ಹಶ್ಮಿ ಸಿಗರೇಟ್ ಸೇದುತ್ತಿರುವುದನ್ನು ಕಾಣಬಹುದು. ಹಣೆಯಲ್ಲಿ ಗಾಯದ ಗುರುತಿದ್ದು, ಒರಟಾಗಿ ಕಾಣಿಸಿಕೊಂಡಿದ್ದಾರೆ. ಫಸ್ಟ್ ಲುಕ್​ ಪೋಸ್ಟರ್ ಹಂಚಿಕೊಂಡ ತಯಾರಕರು ಚಿತ್ರದಲ್ಲಿನ ನಟನ ಪಾತ್ರದ ಹೆಸರನ್ನೂ ಬಹಿರಂಗಪಡಿಸಿದ್ದಾರೆ. 'OMI BHAU' ಎಂಬುದು ಇಮ್ರಾನ್​ ಹಶ್ಮಿ ನಿರ್ವಹಿಸುತ್ತಿರುವ ಪಾತ್ರದ ಹೆಸರು.

ಇದನ್ನೂ ಓದಿ:'ರಾಮಾಯಣ' ಚಿತ್ರಕ್ಕಾಗಿ ಭರ್ಜರಿ ಸಿದ್ಧತೆ: ರಣ್​​ಬೀರ್ ಕಪೂರ್ ಹೆಡ್​ಸ್ಟ್ಯಾಂಡ್ ಫೋಟೋ ವೈರಲ್ - Ranbir Kapoor Headstand

ಇಮ್ರಾನ್​ ಹಶ್ಮಿ ದಕ್ಷಿಣ ಚಿತ್ರರಂಗದ ತಮ್ಮ ಚೊಚ್ಚಲ ಸಿನಿಮಾದ ಪಾತ್ರದ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದ್ದಾರೆ. "ಓಜಿಯೊಂದಿಗೆ ದಕ್ಷಿಣ ಭಾರತದ ಸಿನಿ ಮಾರುಕಟ್ಟೆಯಲ್ಲಿ ಹೊಸ ಹಾದಿಯನ್ನು ಪ್ರಾರಂಭಿಸಲು ನಾನು ಬಹಳ ಉತ್ಸುಕನಾಗಿದ್ದೇನೆ. ಚಿತ್ರವು ಶಕ್ತಿಯುತ ಮತ್ತು ಆಕರ್ಷಕ ನಿರೂಪಣಾ ಶೈಲಿಯನ್ನು ಹೊಂದಿದೆ. ಸಿನಿಮಾ ನನಗೆ ಸವಾಲಿನ ಪಾತ್ರವನ್ನು ಒದಗಿಸಿದೆ. ಪವನ್ ಕಲ್ಯಾಣ್ ಸರ್, ಸುಜೀತ್, ದಾನಯ್ಯ ಸರ್ ಮತ್ತು ಸಂಪೂರ್ಣ ತಂಡದೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ಸಿನಿಪ್ರಿಯರಿಗೆ ಸ್ಮರಣೀಯ ಸಿನಿಮೀಯ ಅನುಭವ ನೀಡುವ ವಿಶ್ವಾಸ ನಮಗಿದೆ'' ಎಂದು ಹಶ್ಮಿ ತಿಳಿಸಿದ್ದಾರೆ.

ಇದನ್ನೂ ಓದಿ:'ಹಣ ಪಾವತಿಸಿ ನನ್ನ ಸಮಯ ಪಡೆಯಿರಿ, ಫ್ರೀಯಾಗಿ ಸಿಗಲ್ಲ': ನಿರ್ದೇಶಕ ಅನುರಾಗ್ ಕಶ್ಯಪ್ - Anurag Kashyap

ಬಹುನಿರೀಕ್ಷಿತ ಚಿತ್ರವನ್ನು ಸುಜೀತ್ ಬರೆದು ನಿರ್ದೇಶಿಸುತ್ತಿದ್ದಾರೆ. ಡಿವಿವಿ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಡಿವಿವಿ ದಾನಯ್ಯ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಚಿತ್ರೀಕರಣವನ್ನು ಮುಂಬೈನಲ್ಲಿ ನಡೆಸಲಾಗಿದೆ. ಅದಾಗ್ಯೂ, ಉಳಿದ ಭಾಗದ ಶೂಟಿಂಗ್​ ಅನ್ನು ಪೂರ್ಣಗೊಳಿಸಲು ಚಿತ್ರತಂಡ ಹೈದರಾಬಾದ್‌ಗೆ ಸ್ಥಳಾಂತರಗೊಳ್ಳಲಿದೆ. ಹಶ್ಮಿ ಮತ್ತು ಕಲ್ಯಾಣ್ ಹೊರತುಪಡಿಸಿ, ಚಿತ್ರದಲ್ಲಿ ಪ್ರಕಾಶ್ ರಾಜ್ ಮತ್ತು ಶ್ರೀಯಾ ರೆಡ್ಡಿ ಸಹ ಇದ್ದಾರೆ. ಪವನ್​ ಕಲ್ಯಾಣ್​​ ದಕ್ಷಿಣ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಭಾರತದಾದ್ಯಂತ ಜನಪ್ರಿಯರಾಗಿರುವ ನಟ. ಇಮ್ರಾನ್ ಹಶ್ಮಿ ಸಹ ಬಾಲಿವುಡ್​ ಚಿತ್ರಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಾಗಾಗಿ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

ABOUT THE AUTHOR

...view details