'ಬಿಗ್ ಬಾಸ್', ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಅಂದ್ರೆ ಉತ್ಪ್ರೇಕ್ಷೆಯಲ್ಲ. ಹೌದು, ತನ್ನದೇ ಆದ ದೊಡ್ಡ ಪ್ರೇಕ್ಷಕ ಬಳಗವನ್ನು ಸಂಪಾದಿಸಿರುವ ಜನಪ್ರಿಯ ಕಾರ್ಯಕ್ರಮ. ಕಾರ್ಯಕ್ರಮ ಶುಭಾರಂಭ ಮಾಡಿ ವಾರ ಕಳೆದಿದೆ. ನಾಳೆ, ಎರಡನೇ ವಾರಾಂತ್ಯ ಕಾರ್ಯಕ್ರಮ ನಡೆಯಬೇಕಿದೆ. ಆದರೆ ಇಂದು ಬಿಗ್ ಬಾಸ್ನ ಅರ್ಧ ಮನೆ ಧ್ವಂಸಗೊಂಡಿದ್ದು, ಸ್ಪರ್ಧಿಗಳ ಜೊತೆಗೆ ವೀಕ್ಷಕರೂ ಗೊಂದಲಕ್ಕೊಳಗಾಗಿದ್ದಾರೆ.
''ಬಿಗ್ ಬಾಸ್ ಮನೆಯಲ್ಲಿ ಎಮರ್ಜೆನ್ಸಿ!'' ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30ಕ್ಕೆ ಎಂಬ ಕ್ಯಾಪ್ಷನ್ನೊಂದಿಗೆ ಕಲರ್ಸ್ ಕನ್ನಡ ತನ್ನ ವಿವಿಧ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಿದೆ.
ಎಮರ್ಜೆನ್ಸಿ ಸೈರನ್ ಜೋರಾಗಿ ಹೊಡೆದುಕೊಂಡಿದ್ದು, ಮನೆ ಮಂದಿಯೆಲ್ಲಾ ಬೆಚ್ಚಿ ಬಿದ್ದಿದ್ದಾರೆ. ಕ್ರೇನ್ನಿಂದ ಮನೆಯೊಳಗೆ ಒಂದಿಷ್ಟು ಮಂದಿ ಎಂಟ್ರಿಯಾಗಿದ್ದಾರೆ. ಬಿಗ್ ಬಾಸ್ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಸಂಪೂರ್ಣ ಕಪ್ಪುಡುಗೆ, ಮುಖಗವಸು ಧರಿಸಿ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ನರಕನಿವಾಸ ಗೆಡವಲು ಕೆಲ ವಸ್ತುಗಳನ್ನೂ ತಮ್ಮೊಂದಿಗೆ ತಂದಿದ್ದಾರೆ. ಏನಿದು? ಎಂದು ಮನೆಯ ಸ್ಪರ್ಧಿಗಳು ಆಶ್ಚರ್ಯಕ್ಕೊಳಗಾಗಿ ನೋಡಿದ್ದಾರೆ.
ಮನೆಯೊಳಗೆ ಎಂಟ್ರಿ ಕೊಟ್ಟವರು ನರಕನಿವಾಸವನ್ನು ಧ್ವಂಸಗೊಳಿಸಿದ್ದಾರೆ. ಬೆಡ್ ಸೇರಿದಂತೆ ಅಗತ್ಯ ವಸ್ತುಗಳನ್ನು ಹೊತ್ತು ಕೊಂಡೊಯ್ದಿದ್ದಾರೆ. ''ಬಿಗ್ ಬಾಸ್ನ 11ನೇ ಅಧ್ಯಾಯದಲ್ಲಿ ನೀವೆಲ್ಲರೂ ಎರಡು ವಾರಗಳನ್ನು ಕಳೆದಿದ್ದೀರಿ. ಇಲ್ಲಿನ ಪ್ರತೀ ಕ್ಷಣವನ್ನೂ ಅನುಭವಿಸಿದ್ದೀರಿ'' ಎಂದು ಹಿನ್ನೆಲೆಯಲ್ಲಿ ಬಿಗ್ ಬಾಸ್ ಧ್ವನಿ ಕೇಳಿಬಂದಿದೆ. ಸ್ವಗರ್ಕ್ಕೂ ನರಕಕ್ಕೂ ಇದ್ದ ಕಬ್ಬಿಣದ ಅಡ್ಡ ಗೋಡೆಯನ್ನು ಅವರುಗಳು ಹೊತ್ತೊಯ್ದಿದ್ದಾರೆ.