ಅಂತಾರಾಷ್ಟ್ರೀಯ ಎಡಗೈ ಬಳಕೆದಾರರ ದಿನದ ಅಂಗವಾಗಿ 'ಎಡಗೈ ಅಪಘಾತಕ್ಕೆ ಕಾರಣ' ಸಿನಿಮಾ ತಂಡದಿಂದ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಎಡಗೈ ಬಳಸುವವರನ್ನೇ ಗಮನದಲ್ಲಿಟ್ಟುಕೊಂಡು, ಅವರ ಜೀವನ ಶೈಲಿ ಕುರಿತು ಈ ಚಿತ್ರ ಕಟ್ಟಿಕೊಡಲಾಗಿದೆ. ಅದರಂತೆಯೇ ಪೋಸ್ಟರ್ ಕೂಡ ಆಕರ್ಷಕವಾಗಿದೆ. ಸೆಟ್ಟೇರಿದ ದಿನದಂದಲೂ ಚಿತ್ರತಂಡ ವಿಭಿನ್ನ ಪೋಸ್ಟರ್ ಅನಾವರಣ ಮಾಡುವ ಮೂಲಕ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ.
ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾಗೆ ಸಮರ್ಥ್ ಬಿ. ಕಡಕೊಳ್ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ವಿಷಯವನ್ನೊಳಗೊಂಡ ಕಥಾ ಹಂದರ ಈ ಸಿನಿಮಾದಲ್ಲಿದೆ. ದೂದ್ ಪೇಡಾ ದಿಗಂತ್ ನಾಯಕನಾಗಿ ನಟಿಸಿದ್ದು, ದಿಗ್ಗಿಗೆ ಜೋಡಿಯಾಗಿ ಹೊಸ ನಟಿ ಧನು ಹರ್ಷ ನಟಿಸುತ್ತಿದ್ದಾರೆ. ಇನ್ನುಳಿದಂತೆ, ನಿಧಿ ಸುಬ್ಬಯ್ಯ, ರಾಧಿಕಾ ನಾರಾಯಣ್, ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್ ಕೂಡಾ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.