ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ನಟನೆಯ "ಇ-ಮೇಲ್" ಚಿತ್ರದ ಟ್ರೇಲರ್ ಹಾಗೂ ಹಾಡುಗಳನ್ನು ಇತ್ತೀಚಿಗೆ ಅದ್ಧೂರಿಯಾಗಿ ಬಿಡುಗಡೆ ಮಾಡಲಾಯಿತು. ತಮಿಳು ಹಾಗೂ ಕನ್ನಡ ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವುದು ಚಿತ್ರದ ಪ್ಲಸ್ ಪಾಯಿಂಟ್. ಎಸಿಪಿ ಶಂಕರ್, ಪ್ರಕೃತಿ ಪ್ರಸನ್ನ, ಸಿರಿ ಮ್ಯೂಸಿಕ್ ಸುರೇಶ್ ಚಿಕ್ಕಣ್ಣ ಸೇರಿದಂತೆ ಹಲವು ಗಣ್ಯರ ಉಪಸ್ಥಿತಿಯಲ್ಲಿ ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಚಿತ್ರರಂಗದಲ್ಲಿ ನಟನೆ, ನಿರ್ದೇಶನ, ಕೊರಿಯೋಗ್ರಫಿ ಮೂಲಕ ದೊಡ್ಡ ಹೆಸರು ಮಾಡಿರುವ 'ಇಂಡಿಯನ್ ಮೈಕಲ್ ಜಾಕ್ಸನ್' ಪ್ರಭುದೇವ ಅವರು "ಇ-ಮೇಲ್" ಚಿತ್ರದ ಟ್ರೇಲರ್ ವೀಕ್ಷಿಸಿ, ವಿಡಿಯೋ ಮೂಲಕ ಶುಭ ಹಾರೈಸಿದರು.
ಚಿತ್ರ ಸಮಾಜದಲ್ಲಿ ಯಾವುದರ ಬಗ್ಗೆ ಬೆಳಕು ಚೆಲ್ಲಲಿದೆ ಎಂಬುದರ ಬಗ್ಗೆ ನಾಯಕಿ ರಾಗಿಣಿ ದ್ವಿವೇದಿ, ನಿರ್ದೇಶಕ ಎಸ್ ಆರ್ ರಾಜನ್ ಕೆಲವೊಂದು ವಿಚಾರಗಳನ್ನು ಹಂಚಿಕೊಂಡರು. ಮೊದಲು ಮಾತು ಶುರು ಮಾಡಿದ ರಾಗಿಣಿ "ಇ-ಮೇಲ್" ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಆನ್ಲೈನ್ ಗೇಮ್ಗಳಿಂದಾಗುವ ಪರಿಣಾಮಗಳನ್ನು ನಿರ್ದೇಶಕರು ಈ ಚಿತ್ರದಲ್ಲಿ ತೋರಿಸಿದ್ದಾರೆ. ಎಸ್ ಆರ್ ರಾಜನ್ ಅವರೇ ನಿರ್ಮಾಣದ ಜೊತೆಗೆ ನಿರ್ದೇಶನವನ್ನು ಮಾಡಿದ್ದಾರೆ. ಕನ್ನಡ ಹಾಗೂ ತಮಿಳಿನಲ್ಲಿ ಈ ಚಿತ್ರ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಚಿತ್ರದ ನಿರ್ದೇಶಕ ಎಸ್ ಆರ್ ರಾಜನ್ ಮಾತನಾಡಿ, ನಾನು ತಮಿಳಿನಲ್ಲಿ ಸಾಕಷ್ಟು ಚಿತ್ರಗಳನ್ನು ನಿರ್ಮಿಸಿದ್ದೇನೆ. ಆದರೆ, ನಿರ್ದೇಶನ ಮಾಡಿರುವ ಮೊದಲ ಚಿತ್ರ "ಇ-ಮೇಲ್". ಎರಡು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿದೆ. ರಾಗಿಣಿ, ಅಶೋಕ್ ಸೇರಿದಂತೆ ಇಡೀ ತಂಡಕ್ಕೆ, ಟೀಸರ್ ಬಿಡುಗಡೆ ಮಾಡಿಕೊಟ್ಟ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಹಾಗೂ ಟ್ರೇಲರ್ ನೋಡಿ ಮೆಚ್ಚುಗೆ ಮಾತುಗಳನ್ನಾಡಿದ ಪ್ರಭುದೇವ ಅವರಿಗೆ ನಾನು ಕೃತಜ್ಞನಾಗಿರುತ್ತೇನೆ ಎಂದರು.