ಕನ್ನಡ ಚಿತ್ರರಂಗದ ಹೆಸರಾಂತ ನಟ ಶಿವರಾಜ್ಕುಮಾರ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ 'ಭೈರತಿ ರಣಗಲ್' ಬಿಡುಗಡೆಯಾಗಿ 3 ದಿನ ಭರ್ಜರಿ ಪ್ರದರ್ಶನ ಕಂಡಿದೆ. ನವೆಂಬರ್ 15, ಶುಕ್ರವಾರದಂದು ಚಿತ್ರಮಂದಿರಗಳನ್ನು ಪ್ರವೇಶಿಸಿದ ಮಫ್ತಿ ಪ್ರೀಕ್ವೆಲ್ ಅನ್ನು ಹೆಚ್ಚಿನ ಸಂಖ್ಯೆಯ ಸಿನಿಪ್ರಿಯರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಸಿನಿಮಾ ಭರ್ಜರಿ ರೆಸ್ಪಾನ್ಸ್ ಸ್ವೀಕರಿಸುತ್ತಿದ್ದು, ಬಾಕ್ಸ್ ಆಫೀಸ್ ಅಂಕಿಅಂಶಗಳು ಸಹ ಉತ್ತಮವಾಗಿವೆ.
ಭೈರತಿ ರಣಗಲ್ ಬಾಕ್ಸ್ ಆಫೀಸ್ ಕಲೆಕ್ಷನ್: ಈ ಸಾಲಿನ ದಕ್ಷಿಣ ಚಿತ್ರರಂಗದ ಪ್ರಮುಖ ಸಿನಿಮಾವಾಗಿ ಗುರುತಿಸಿಕೊಂಡಿದ್ದ ಭೈರತಿ ರಣಗಲ್ ಅಂದುಕೊಂಡಂತೆ ಅದ್ಧೂರಿಯಾಗಿಯೇ ತೆರೆಗಪ್ಪಳಿಸಿದೆ. ಶುಕ್ರವಾರ ಚಿತ್ರಮಂದಿರಗಳ ಎದುರು ಅಭಿಮಾನಿಗಳು ಹಬ್ಬದ ವಾತಾವರಣ ಸೃಷ್ಟಿಸಿದ್ದರು. ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿದ್ದರು. ನಟ ಡಾಲಿ ಧನಂಜಯ್ ಕುಣಿದು ಕಪ್ಪಳಿಸಿದ್ದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಸಿನಿಮಾದ ಗಳಿಕೆ ಉತ್ತಮವಾಗಿರಲಿದೆ ಎಂದು ಊಹಿಸಲಾಗಿತ್ತು. ನಿರೀಕ್ಷೆಯಂತೆ, ಬಾಕ್ಸ್ ಆಫೀಸ್ ಅಂಕಿಅಂಶ ಉತ್ತಮವಾಗಿ ಸಾಗಿದೆ.
ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಭೈರತಿ ರಣಗಲ್ ಸಿನಿಮಾ 2 ಕೋಟಿ ರೂಪಾಯಿಯೊಂದಿಗೆ ತನ್ನ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿದೆ. ಸೆಂಚುರಿ ಸ್ಟಾರ್ನ ಸಿನಿಮಾ ಕನ್ನಡ ಚಿತ್ರರಂಗದ ಗೆಲುವನ್ನು ಮುಂದುವರಿಸಿದೆ. ಈ ಮಾಹಿತಿ ಹೊರತಾಗಿಯೂ ಅಭಿಮಾನಿಗಳು ಮತ್ತು ಸಿನಿಪ್ರಿಯರು ಕಲೆಕ್ಷನ್ನ ಅಧಿಕೃತ ಘೋಷಣೆಯನ್ನು ಚಿತ್ರತಂಡದಿಂದ ನಿರೀಕ್ಷಿಸಿದ್ದಾರೆ.