ಪವನ್ ಒಡೆಯರ್ ನಿರ್ಮಾಣದ ಮೊದಲ ಸಿನಿಮಾ 'ಡೊಳ್ಳು' ಈಗಾಗಲೇ ಪ್ರಪಂಚಕ್ಕೆ ಒಂದು ಸುತ್ತು ಹೊಡೆದಿದೆ. ಪ್ರತಿಷ್ಟಿತ ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವ, ಅಂತಾರಾಷ್ಟ್ರೀಯ ಢಾಕಾ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿರುವ ಈ ಸಿನಿಮಾ, ಎರಡು ರಾಷ್ಟ್ರಪ್ರಶಸ್ತಿಗಳನ್ನೂ ಗೆದ್ದುಕೊಂಡಿದೆ. ಇದೀಗ ಚಿತ್ರ ಮತ್ತೊಂದು ಅಂತಾರಾಷ್ಟ್ರೀಯ ಮನ್ನಣೆಗೆ ಭಾಜನವಾಗುತ್ತಿದೆ.
ಮೆಕ್ಸಿಕೋದಲ್ಲಿ ನಡೆಯಲಿರುವ ಚಿತ್ರೋತ್ಸವದಲ್ಲಿ ಡೊಳ್ಳು ಪ್ರದರ್ಶನ ಕಾಣಲಿದೆ. ಆಸ್ಕರ್ ಪ್ರಶಸ್ತಿ ಗೆದ್ದಿರುವ ಎಸ್.ಎಸ್.ರಾಜಮೌಳಿ ನಿರ್ದೇಶನದ ಬ್ಲಾಕ್ಬಸ್ಟರ್ ಸಿನಿಮಾ ಆರ್ಆರ್ಆರ್, ದೀಪಿಕಾ ಪಡುಕೋಣೆ ಹಾಗೂ ರಣ್ಬೀರ್ ಸಿಂಗ್ ನಟನೆಯ ಬಾಜಿರಾವ್ ಮಸ್ತಾನಿ, ಸೂರ್ಯ ನಟನೆಯ ಸೂರರೈ ಪೊಟ್ರು, ಅಜಯ್ ದೇವಗನ್ ನಟನೆಯ ತನ್ಹಾಜಿ ಚಿತ್ರಗಳೊಂದಿಗೆ ಕನ್ನಡದ 'ಡೊಳ್ಳು' ಕೂಡ ಪ್ರದರ್ಶನ ಕಾಣುತ್ತಿದೆ.
'ಡೊಳ್ಳು' ಶೀರ್ಷಿಕೆಯೇ ಹೇಳುವಂತೆ ಡೊಳ್ಳು ಕುಣಿತದ ಸುತ್ತ ಹಾಗೂ ಕನ್ನಡ ನಾಡಿದ ಜಾನಪದ ಸೊಗಡು ಆಧರಿಸಿದ ಕಥೆ. ಸಾಗರ್ ಪುರಾಣಿಕ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ ನಟಿಸಿದ್ದಾರೆ. ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ಯ ಸುರೇಶ್ ಸೇರಿದಂತೆ ಹಲವು ಕಲಾವಿದರು ಸಿನಿಮಾದ ಭಾಗವಾಗಿದ್ದಾರೆ.