ದೇಶದೆಲ್ಲೆಡೆ ಇಂದು 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಯೋಗಾಸನ ಅಥವಾ ಯೋಗಪಟು ಅಂದಾಕ್ಷಣ ಮೊದಲಿಗೆ ನೆನಪಿಗೆ ಬರೋದು ಕನ್ನಡ ಚಿತ್ರರಂಗದ ಮೇರು ನಟ ದಿ.ಡಾ.ರಾಜ್ಕುಮಾರ್. ಅದರಲ್ಲೂ ಕಾಮನಬಿಲ್ಲು ಚಿತ್ರದಲ್ಲಿ ನೈಜವಾಗಿ ಯೋಗ ಮಾಡುವ ಮೂಲಕ ರಾಜ್ ಓರ್ವ ಶ್ರೇಷ್ಠ ನಟ ಮಾತ್ರವಲ್ಲದೇ, ಶ್ರೇಷ್ಠ ಯೋಗಪಟು ಎಂದೂ ಕರೆಯಿಸಿಕೊಂಡರು.
ಹೌದು, ಈ ಚಿತ್ರದ ಚಿತ್ರೀಕರಣದ ವೇಳೆ ಅಣ್ಣಾವ್ರು ಯೋಗ ಮಾಡುವ ದೃಶ್ಯವನ್ನು ಶೂಟ್ ಮಾಡಬೇಕಿತ್ತು. ಹಾಗಾಗಿ ಮುಂಜಾನೆ ಇಡೀ ಚಿತ್ರತಂಡ ಚಿತ್ರೀಕರಣದಲ್ಲಿ ಭಾಗವಹಿಸಿತ್ತು. ನಿರ್ದೇಶಕ ಚಿ. ದತ್ತುರಾಜ್, ನಟಿ ಸರಿತಾ ಸೇರಿದಂತೆ ಎಲ್ಲರೂ ಚಳಿಯಲ್ಲಿ ನಡುಗುತ್ತಿದ್ದರು. ಆದರೆ, ರಾಜ್ಕುಮಾರ್ ಮಾತ್ರ ಯಾವುದೇ ಚಳಿ, ಗಾಳಿಯನ್ನು ಲೆಕ್ಕಿಸದೇ ಬಹಳ ಶ್ರದ್ಧೆಯಿಂದ ಯೋಗಾಭ್ಯಾಸ ಮಾಡಿದ್ದರು. ಇದನ್ನು ಕಂಡ ಚಿತ್ರತಂಡ ಆಶ್ಚರ್ಯಗೊಂಡಿದ್ದರಂತೆ.
ಡಾ. ರಾಜ್ಕುಮಾರ್ ಅವರು ಯೋಗವನ್ನು ಹವ್ಯಾಸದ ಜೊತೆಗೆ, ಜೀವನದ ಒಂದು ಭಾಗವಾಗಿಸಿಕೊಂಡಿದ್ದಕ್ಕೆ ಒಂದು ಕಾರಣವಿದೆ. ಸತತ ಶೂಟಿಂಗ್, ಪ್ರಯಾಣ ಎಂದು ಬಳಲಿದ್ದ ರಾಜ್ ಅವರಿಗೆ 1978ರಲ್ಲಿ ಆಪರೇಷನ್ ಡೈಮಂಡ್ ರಾಕೆಟ್ ಸಿನಿಮಾದ ನಂತರ ಮಂಡಿ ನೋವು ಕಾಣಿಸಿಕೊಂಡಿತ್ತು. ಈ ಮಂಡಿ ನೋವಿಗೆ ಸಾಕಷ್ಟು ಬಾರಿ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಲಿಲ್ಲ. ಆ ಸಮಯದಲ್ಲಿ ಸಂಬಂಧಿಕರೊಬ್ಬರು ಯೋಗ ಮಾಡಿ ಎಂದು ಸಲಹೆ ನೀಡಿದರು.
ಅದರಂತೆ, ನಟಸಾರ್ವಭೌಮ ಯೋಗವನ್ನು ತಮ್ಮ ಜೀವನದಲ್ಲಿ ರೂಢಿಸಿಕೊಂಡರು. ಯೋಗ ಅವರ ಜೀವನದ ಒಂದು ಪ್ರಮುಖ ಭಾಗವಾಗಿತ್ತು. ಸಾಮಾನ್ಯವಾಗಿ ಓರ್ವ ಮನುಷ್ಯನಿಗೆ 40 ವರ್ಷ ದಾಟುತ್ತಿದ್ದಂತೆ ದೇಹ ದಣಿಯಲು ಶುರುವಾಗುತ್ತೆ. ಆದರೆ, ರಾಜ್ ಅವರು ತಮ್ಮ 50ನೇ ವಯಸ್ಸಿನಲ್ಲೂ ಉತ್ತಮವಾಗಿ ಯೋಗ ಮಾಡುತ್ತಿದ್ದರು. ಹಾಗಾದರೆ ಎಷ್ಟರ ಮಟ್ಟಿಗೆ ಯೋಗವನ್ನು ಅವಲಂಬಿಸಿದ್ದರು ಎಂಬುದನ್ನು ನೀವೇ ಊಹಿಸಿ.