'ರಾಮಾಯಣ'. ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ. ಇನ್ನೂ ಅಧಿಕೃತವಾಗಿ ಘೋಷಣೆಯಾಗದಿದ್ದರೂ ಸೆಟ್ನಿಂದ ಫೋಟೋ, ವಿಡಿಯೋಗಳು ವೈರಲ್ ಆಗುತ್ತಿವೆ. ಬಾಲಿವುಡ್ ನಟ ರಣ್ಬೀರ್ ಕಪೂರ್, ಸೌತ್ ಕ್ವೀನ್ ಸಾಯಿ ಪಲ್ಲವಿ, ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಮುಖ್ಯಭೂಮಿಕೆಯ ಚಿತ್ರದ ಕುರಿತು ಅಂತೆಕಂತೆಗಳು ಜೋರಾಗಿವೆ. ಇದೀಗ ಬಜೆಟ್ ಮತ್ತು ಬಿಡುಗಡೆ ದಿನಾಂಕದ ಬಗ್ಗೆ ಚರ್ಚೆ ನಡೆಯುತ್ತಿದೆ.
ಬಹುಬೇಡಿಕೆಯ ತಾರೆಯರ ಚಿತ್ರಕ್ಕಾಗಿ ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. 'ದಂಗಲ್', 'ಛಿಚೋರೆ' ಮೊದಲಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ನಿತೇಶ್ ತಿವಾರಿ ಕನಸಿನ ಯೋಜನೆ ಇದಾಗಿದೆ. ಚಿತ್ರದ ಕೆಲಸಗಳು ಬಹಳ ದಿನಗಳ ಹಿಂದೆಯೇ ಆರಂಭವಾಗಿವೆ. ಇತ್ತೀಚೆಗೆ, ಚಿತ್ರದ ರಣ್ಬೀರ್, ಸಾಯಿ ಪಲ್ಲವಿ, ಅರುಣ್ ಗೋವಿಲ್ ಮತ್ತು ಲಾರಾ ದತ್ತಾ ಅವರ ಲುಕ್ ಸೋರಿಕೆಯಾಗಿತ್ತು. ಇದೀಗ ಮೇಕಿಂಗ್, ಬಜೆಟ್, ರಿಲೀಸ್ ಡೆಟ್ ಬಗ್ಗೆ ದೊಡ್ಡ ಅಪ್ಡೇಟ್ ಹೊರಬಿದ್ದಿದೆ.
ವರದಿಗಳ ಪ್ರಕಾರ, ರಾಮಾಯಣ ಮೂರು ಭಾಗಗಳಲ್ಲಿ ಮೂಡಿ ಬರಲಿದೆ. ಮೊದಲ ಭಾಗದ ಮೇಕಿಂಗ್ ಬಜೆಟ್ 800 ಕೋಟಿ ರೂಪಾಯಿಗೂ ಹೆಚ್ಚೆಂದು ಹೇಳಲಾಗುತ್ತಿದೆ. ಇದರೊಂದಿಗೆ 'ರಾಮಾಯಣ' ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಬಿಗ್ ಬಜೆಟ್ ಚಿತ್ರವಾಗಲಿದೆ. 2023ರಲ್ಲಿ ಬಿಡುಗಡೆಯಾದ 'ಆದಿಪುರುಷ್' ಈವರೆಗಿನ ಭಾರತೀಯ ಚಿತ್ರರಂಗದ ಅತಿದೊಡ್ಡ ಬಜೆಟ್ನ ಚಿತ್ರ ಎನ್ನಲಾಗಿದೆ. ಇದನ್ನು ನಿರ್ಮಿಸಲು 700 ಕೊಟಿ ರೂ. ವೆಚ್ಚವಾಗಿದೆ.