ದಾವಣಗೆರೆ: ಪೂಜೆ ಮಾಡಿ ತಮಗೆ ಎದುರಾಗಿರುವ ಕಷ್ಟ ಪರಿಹರಿಸುವ ಸೋಗಿನಲ್ಲಿ ಬಂದು ಮನೆಯಲ್ಲಿದ್ದ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದ ಇಬ್ಬರನ್ನು ಬಂಧಿಸಿದ್ದಾಗಿ ಹರಿಹರ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಾವಣಗೆರೆಯ ನಿವಾಸಿ ಇಸ್ಮಾಯಿಲ್ ಜಬೀವುಲ್ಲಾ (30), ಒಡಿಶಾ ರಾಜ್ಯದ ರುಕ್ಸಾನ ಬೇಗಂ (30) ಬಂಧಿತರು. ಆರೋಪಿಗಳಿಂದ ಕಳ್ಳತನ ಮಾಡಿದ್ದ ಒಟ್ಟು 8,65,000 ರೂಪಾಯಿ ಮೌಲ್ಯದ 90 ಗ್ರಾಂ ಬಂಗಾರದ ಆಭರಣಗಳು, 750 ಗ್ರಾಂ ತೂಕದ ಬೆಳ್ಳಿಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದ ಶಶಿಕಲಾ, ರಮೇಶ ಎಂಬವರ ಮನೆಯಲ್ಲಿ ಕಳ್ಳತನ ನಡೆದ ಪ್ರಕರಣದಲ್ಲಿ ಈ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಹಣಕಾಸಿನ ಸಮಸ್ಯೆ ಪರಿಹಾರ ಮಾಡ್ತೇವೆಂದು ಕಳ್ಳತನ!: ಮನೆಯಲ್ಲಿ ಹಣಕಾಸಿನ ಸಮಸ್ಯೆ ಪರಿಹಾರ ಮಾಡಲು ಪೂಜೆ ಮಾಡುತ್ತೇವೆ ಎಂದು ಹೇಳಿಕೊಂಡು ಇಸ್ಮಾಯಿಲ್ ಜಬೀವುಲ್ಲಾ ಮತ್ತು ರುಕ್ಸಾನ ಬೇಗಂ ಎಂಬವರು ಫೆ.11 ರಂದು ಬನ್ನಿಕೋಡು ಗ್ರಾಮದ ಶಶಿಕಲಾ ಮತ್ತು ರಮೇಶ್ ಅವರ ಮನೆಗೆ ಆಗಮಿಸಿದ್ದರು. ಸಂಜೆ 04 ಗಂಟೆಯಿಂದ 06 ಗಂಟೆಯ ಮಧ್ಯದ ಅವಧಿಯಲ್ಲಿ ಮನೆಯಲ್ಲಿದ್ದ ಒಟ್ಟು 1,44,000 ರೂ ಬೆಲೆ ಬಾಳುವ 02 ತೊಲ 02 ಗ್ರಾಂ ಬಂಗಾರದ ಆಭರಣಗಳನ್ನು ಪೂಜೆ ಮಾಡಿಕೊಡುತ್ತೇವೆ ಎಂದು ಹೇಳಿ ಪಡೆದಿದ್ದರು. ಬಳಿಕ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಆರೋಪಿಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ರೀತಿಯ ಕ್ರಮ ಜರುಗಿಸಿ ಎಂದು ಶಶಿಕಲಾ ಮತ್ತು ರಮೇಶ್ ದೂರು ನೀಡಿದ್ದರು. ಆರೋಪಿಗಳ ವಿರುದ್ಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಮತ್ತು ಆಜಾದ್ ನಗರ ಠಾಣೆಯಲ್ಲಿ ಒಂದು ಪ್ರಕರಣ ಈ ಹಿಂದೆ ದಾಖಲಾಗಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಕರಣ ಭೇದಿಸಿದ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಶ್ಲಾಘಿಸಿದರು.
ಇದನ್ನೂ ಓದಿ: 2.5 ಕೆ.ಜಿ ಚಿನ್ನಾಭರಣ ಕದ್ದು ಪರಾರಿ: ಹಾಲ್‌ಮಾರ್ಕ್ ಸೆಂಟರ್ ಕೆಲಸಗಾರರ ಬಂಧನ
ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲೇ ಬೈಕ್ ಕಳವು: ಇಬ್ಬರ ಬಂಧನ