ಎಸ್ಎಸ್ ರಾಜಮೌಳಿ, ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಿರ್ದೇಶಕ. ಜಕ್ಕಣ್ಣ ಎಂದೇ ಖ್ಯಾತರಾಗಿರುವ ಇವರು ಅದ್ಭುತ ಸಿನಿಮಾ ಮಾಡುವುದರಿಂದ ಹಿಡಿದು ಎಲ್ಲ ಕೆಲಸಗಳಲ್ಲಿ ತಮ್ಮ ಪರಿಪೂರ್ಣತೆ ಪ್ರದರ್ಶಿಸುತ್ತಾರೆ. ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನದಲ್ಲಿರಿಸಿ, ಯಶಸ್ಸಿನ ಪಯಣ ಮುಂದುವರಿಸಿದ್ದಾರೆ. ಶೂಟಿಂಗ್ ಸಮಯದಲ್ಲಿ ಬಹಳ ಕಟ್ಟುನಿಟ್ಟಿನ ನಿರ್ದೇಶಕರು. ಆಫ್ - ಸ್ಕ್ರೀನ್‌ನಲ್ಲಿ ಬಹಳ ತಮಾಷೆಯ ವ್ಯಕ್ತಿ. ಸಾಧ್ಯವಾದಾಗಲೆಲ್ಲ ಸ್ನೇಹಿತರು ಮತ್ತು ಕುಟುಂಬಸ್ಥರೊಂದಿಗೆ ಉತ್ತಮ ಸಮಯ ಕಳೆಯುತ್ತಾರೆ.
ಇತ್ತೀಚೆಗೆ, ತಮ್ಮ ಕುಟುಂಬಸ್ಥರ ವಿವಾಹ ಸಮಾರಂಭದಲ್ಲಿ ಪತ್ನಿ ರಮಾ ಅವರೊಂದಿಗೆ ರಾಜಮೌಳಿ ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ನಿರ್ದೇಶಕರು ತಮ್ಮ 51ರ ಹರೆಯದಲ್ಲೂ ಅತ್ಯುತ್ತಮವಾಗಿ ಡ್ಯಾನ್ಸ್ ಮಾಡಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು. ವಿಡಿಯೋ ನೋಡಿದ ಅಭಿಮಾನಿಗಳು 'ಇಷ್ಟು ವರ್ಷ ಈ ಪ್ರತಿಭೆಯನ್ನು ಎಲ್ಲಿ ಬಚ್ಚಿಟ್ಟಿದ್ದಿರಿ' ಎಂದು ಮೆಚ್ಚುಗೆಯ ಸುರಿಮಳೆಯನ್ನೇ ಹರಿಸಿದರು. ವಿಡಿಯೋ ಅಷ್ಟು ಸ್ಪಷ್ಟವಾಗಿಲ್ಲದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿತ್ತು. ಇದೀಗ ಇದಕ್ಕೆ ಸಂಬಂಧಿಸಿದ ರಿಹರ್ಸಲ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ವೈರಲ್ ವಿಡಿಯೋದಲ್ಲಿ ರಾಜಮೌಳಿ-ರಮಾ ದಂಪತಿ ಡ್ಯಾನ್ಸ್ ಪ್ರ್ಯಾಕ್ಟೀಸ್ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ನೆಟ್ಟಿಗರನ್ನು ಆಕರ್ಷಿಸುತ್ತಿದೆ. ಅವರು ಪರ್ಫೆಕ್ಟ್ ಆಗಿ ಹೆಜ್ಜೆ ಹಾಕಿರುವ ರೀತಿ ನೋಡಿದರೆ ರಾಜಮೌಳಿ ಯಾವುದೇ ಕೆಲಸವನ್ನು ಪ್ರಾಮಾಣಿಕವಾಗಿ, ಯಶಸ್ವಿಯಾಗಿ ಮಾಡುತ್ತಾರೆ ಎಂಬರ್ಥದ ಅಭಿಪ್ರಾಯಗಳು ವ್ಯಕ್ತವಾಗಿದೆ. ಅಲ್ಲದೇ ಜಕ್ಕಣ್ಣನ ಈ ಆ್ಯಂಗಲ್ ಸೋ ಕ್ಯೂಟ್ ಎಂಬ ಕಾಮೆಂಟ್ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದುಬಂದಿದೆ.