ಕರ್ನಾಟಕ

karnataka

ETV Bharat / entertainment

ಗ್ರೀನ್ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ "ಕಪ್ಪೆ ರಾಗ" ಕಿರು ಚಿತ್ರದ ಬಗ್ಗೆ ನಿರ್ದೇಶಕ ಹೇಳಿದ್ದೇನು? - Green Oscar Award for Kappe Raga

ಪ್ರಶಾಂತ್ ಎಸ್.ನಾಯಕ್ ನಿರ್ದೇಶನದಲ್ಲಿ ಮೂಡಿ ಬಂದಿರುವ "ಕಪ್ಪೆ ರಾಗ" ಚಿತ್ರ ಗ್ರೀನ್ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಕಪ್ಪೆ ರಾಗ
ಕಪ್ಪೆ ರಾಗ

By ETV Bharat Karnataka Team

Published : Mar 15, 2024, 3:45 PM IST

Updated : Mar 15, 2024, 3:53 PM IST

ಬೆಂಗಳೂರು :ಗ್ರೀನ್ ಆಸ್ಕರ್ ಪ್ರಶಸ್ತಿ ಪಡೆದಿರುವ ಕನ್ನಡದ ಪ್ರಪ್ರಥಮ ಕಿರು ಚಿತ್ರ ಎಂಬ ಹೆಗ್ಗಳಿಕೆಗೆ 'ಕಪ್ಪೆ ರಾಗ' ಪಾತ್ರವಾಗಿದೆ. ಪ್ರಶಾಂತ್ ಎಸ್.ನಾಯಕ್ ಅವರ ಆರು ವರ್ಷಗಳ ಶ್ರಮದಿಂದ ಆರು ನಿಮಿಷಗಳ ಈ ಸುಂದರ ದೃಶ್ಯ ಕಾವ್ಯ ನಿರ್ಮಾಣವಾಗಿದೆ‌. ಇದೀಗ ಈ ಕಿರುಚಿತ್ರದ ಬಗ್ಗೆ ನಿರ್ದೇಶಕ ಪ್ರಶಾಂತ್ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ವರ್ಲ್ಡ್ ವೈಲ್ಡ್ ಫೋಟೋಗ್ರಾಫಿ ನನ್ನ ಹವ್ಯಾಸ ಎಂದು ಮಾತನಾಡಿದ ಪ್ರಶಾಂತ್ ಎಸ್.ನಾಯಕ್, ಜಗತ್ತಿನ ಎಲ್ಲ ಪರಿಸರ ಚಿತ್ರಕಲಾಸಕ್ತರ ಮನಸ್ಸನ್ನು ಗೆದ್ದಿರುವ ಕಪ್ಪೆ ನಮ್ಮ ಪಶ್ಚಿಮ ಘಟ್ಟದ ಕರುನಾಡ ಕಪ್ಪೆ. ಈ ಕಪ್ಪೆಯನ್ನು ಕುಂಬಾರ ಎಂದು ಕರೆಯುತ್ತಾರೆ. "ಕಪ್ಪೆ ರಾಗ"ದ ನಾಯಕ ಹಾಗೂ ಜಗದ ಮೊದಲ "ಕುಂಬಾರ"ನ ಕಥೆಯಿದು. 2014 ರಲ್ಲಿ ಮೊದಲ ಬಾರಿಗೆ ಕಂಡು ಬಂದ ಕಪ್ಪೆಯಿದು. ಇರಳುಗಪ್ಪೆಯಾಗಿರುವುದರಿಂದ ಇದನ್ನು ಸೆರೆ ಹಿಡಿಯಲು ಕಷ್ಟ. ತುಂಬಾ ಕಷ್ಟಪಟ್ಟು ಈ ಪ್ರಯತ್ನ ಮಾಡಿದ್ದೇವೆ.

ಪಶ್ಚಿಮಘಟ್ಟದಲ್ಲಿ ಅದರಲ್ಲೂ ರಾತ್ರಿ ಮಾತ್ರ ಕಾಣುವ ಕಪ್ಪೆಯಿದು. ನಾನು ಇದರ ಅನ್ವೇಷಣೆಗಾಗಿ ಆರು ವರ್ಷಗಳ ಹಿಂದೆ ಕರ್ನಾಟಕದ ಮಲೆನಾಡಿನ ಪಶ್ಚಿಮಘಟ್ಟದ ಬಳಿ ಹೋಗಿ ಈ ಅಪರೂಪದ ಕಪ್ಪೆಯನ್ನು ಕಂಡುಬಂದೆ. ಕುಪ್ಪಳಿಸುವ ಕಪ್ಪೆ ಕಂಡಿದ್ದ ನಾನು, ನಿಂತಿರುವ ಕಪ್ಪೆ ಕಂಡು ಬೆರಗಾದೆ. ಆದರೆ, ಆಗ ಚಿತ್ರೀಕರಣ ಮಾಡಲಿಲ್ಲ. ಕೆಲವು ವರ್ಷಗಳ ನಂತರ ಏಳೆಂಟು ಸ್ನೇಹಿತರ ತಂಡ ಅಲ್ಲಿಗೆ ತೆರಳಿದ್ದೆವು. ರಾತ್ರಿ ಮಾತ್ರ ಬರುವ ಆ ಹೆಣ್ಣು ಕಪ್ಪೆ ಬಹಳ ಸೂಕ್ಷ್ಮ. ಸ್ವಲ್ಪ ಶಬ್ದವಾದರೂ ಹೊರಟು ಹೋಗುತ್ತದೆ. ನಾವು ಇಷ್ಟು ಜನ ಹೋಗಿದ್ದರೂ ಶಬ್ದ ಮಾಡದೇ, ಚಿತ್ರೀಕರಣ ಮಾಡಿಕೊಂಡು ಬಂದಿರುವುದು ಒಂದು ಸಾಹಸ ಎಂದು ತಮ್ಮ ಅನುಭವ ವ್ಯಕ್ತಪಡಿಸಿದರು.

ಮೊಟ್ಟೆಗಳನ್ನು ಕಾಯುವ ಗಂಡು ಕಪ್ಪೆ :ಸಂತಾನೋತ್ಪತ್ತಿಗಾಗಿ ಗಂಡು ಕಪ್ಪೆಯನ್ನು ಹುಡುಕಿ ಬರುವ ಈ ಹೆಣ್ಣು ಕಪ್ಪೆ, ಗಂಡು ಕಪ್ಪೆಯೊಂದಿಗೆ ಸೇರಿ ಏಳೆಂಟು ಮೊಟ್ಟೆ ಇಟ್ಟು ಹೊರಟು ಬಿಡುತ್ತದೆ. ಇಲ್ಲೊಂದು ಆಶ್ಚರ್ಯ. ಎಲ್ಲ ಪ್ರಾಣಿಗಳ ಮೊಟ್ಟೆಗಳನ್ನು ಸಾಮಾನ್ಯವಾಗಿ ತಾಯಿ ಪ್ರಾಣಿ ಕಾಯುತ್ತದೆ. ಇಲ್ಲಿ ಮೊಟ್ಟೆಗಳನ್ನು ಕಾಯುವುದು ತಂದೆ ಪ್ರಾಣಿ. ಆ ಮೊಟ್ಟೆಗಳು ಯಾವುದೇ ಪ್ರಾಣಿಗಳ ಕಣ್ಣಿಗೆ ಬೀಳದ ಹಾಗೆ ಅಲ್ಲಿನ ಬಂಡೆ ಕಲ್ಲಿನ ಮೇಲೆ ಅಂಟಿಸಿ, ಮಣ್ಣಿನಿಂದ ಪ್ಲಾಸ್ಟಿಂಗ್ ಮಾಡುತ್ತದೆ. ಒಂದು ವಾರದ ಬಳಿಕ ಅವು ಕಪ್ಪೆ ಮರಿಗಳಾಗಿ ಹೊರ ಬರುತ್ತದೆ. ಇಂತಹ ಅಪರೂಪದ ಕಪ್ಪೆಯ ಕುರಿತು ಚಿತ್ರೀಕರಣ ಮಾಡಿಕೊಂಡು ಬಂದ ಮೇಲೆ ಇದಕ್ಕೆ ಕಾವ್ಯ ರೂಪ ಕೊಡಬೇಕೆಂದು ನಿರ್ಧರಿಸಿದ್ದೆವು. ಗೆಳೆಯ ಪ್ರದೀಪ್ ಕೆ.ಶಾಸ್ತ್ರಿ ಅದ್ಭುತ ಹಾಡೊಂದನ್ನು ಬರೆದುಕೊಟ್ಟರು. ರಾಜೇಶ್ ಕೃಷ್ಣನ್ ಹಾಗೂ ಅರುಂಧತಿ, ಅಶ್ವಿನ್ ಪಿ.ಕುಮಾರ್ ಸಂಗೀತ ನೀಡಿರುವ, ಈ ಹಾಡನ್ನು ಹಾಡಿದ್ದಾರೆ. ನಾನೇ ಪ್ರಧಾನ ಛಾಯಾಗ್ರಹಣದೊಂದಿಗೆ ನಿರ್ದೇಶನವನ್ನು ಮಾಡಿದ್ದೇನೆ ಎಂದು ಪ್ರಶಾಂತ್​ ತಿಳಿಸಿದರು.

ಇನ್ನು ಈ ಕಿರುಚಿತ್ರಕ್ಕೆ ಗ್ರೀನ್ ಆಸ್ಕರ್ ಅಥವಾ ಜ್ಯಾಕ್ ಸ್ವಾನ್ ವೈಲ್ಡ್ ಮೀಡಿಯಾ ಅವಾರ್ಡ್ ಬಂದಿದೆ. ಜಗತ್ತಿನ ಅತಿ ಪ್ರತಿಷ್ಠಿತ ಪರಿಸರ-ವನ್ಯಜೀವಿ ಚಿತ್ರಕ್ಕೆ ನೀಡುವ ಪುರಸ್ಕಾರವಿದು. ಇದು ವೈಲ್ಡ್ ಲೈಫ್ ಚಿತ್ರಗಳ ಆಸ್ಕರ್ ಎಂದೇ ಪ್ರಸಿದ್ಧವಾಗಿದೆ. ಬಿಬಿಸಿ, ನೆಟ್ ಫ್ಲಿಕ್ಸ್, ಪಿಬಿಎಸ್ ನೇಚರ್, ನ್ಯಾಷನಲ್ ಜಿಯೋಗ್ರಾಫಿಕ್ ಮುಂತಾದ ಹಿರಿಯ ಚಿತ್ರ ಸಂಸ್ಥೆಗಳು ಕೋಟ್ಯಂತರ ರೂಪಾಯಿಗಳನ್ನು ಹೂಡಿ ತಯಾರಿಸುವ ತಮ್ಮ ಚಿತ್ರಗಳನ್ನು ಗ್ರೀನ್ ಆಸ್ಕರ್ ಪ್ರಶಸ್ತಿಗೆ ಕಳುಹಿಸಿಕೊಡುತ್ತಾರೆ. ಅಂತಹ ಅತ್ಯುತ್ತಮ ಪ್ರಶಸ್ತಿ ಇದಾಗಿದೆ. ಭಾರತದಲ್ಲೇ ಹಿಂದಿ ಚಿತ್ರವೊಂದಕ್ಕೆ ಬಿಟ್ಟರೆ, "ಕಪ್ಪೆ ರಾಗ"ಕ್ಕೆ ಗ್ರೀನ್ ಆಸ್ಕರ್ ಪ್ರಶಸ್ತಿ ಬಂದಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ.

ಇನ್ನು ಕಪ್ಪೆ ರಾಗ ಕಿರು ಚಿತ್ರ ವೀಕ್ಷಿಸಿರುವ ಸದ್ಗುರು ಜಗ್ಗಿ ವಾಸುದೇವ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಮಾರ್ಚ್ 16 ರಂದು ಬೆಂಗಳೂರಿನಲ್ಲಿ ನಡೆಯುವ ದೊಡ್ಡ ಸಮಾರಂಭವೊಂದರಲ್ಲಿ "ಕಪ್ಪೆ ರಾಗ" ಲೋಕಾರ್ಪಣೆಯಾಗಲಿದೆ.

ಇದನ್ನೂ ಓದಿ :'ಕೆಂಡ' ಚಿತ್ರಕ್ಕೆ ರಿತ್ವಿಕ್‍ ಕಾಯ್ಕಿಣಿ ಸಂಗೀತ: ಯೋಗರಾಜ್ ಭಟ್ ಹೇಳಿದ್ದೇನು?

Last Updated : Mar 15, 2024, 3:53 PM IST

ABOUT THE AUTHOR

...view details