ಗೌರಿ ಚಿತ್ರದ ಟೈಟಲ್ನಿಂದಲೇ ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿಯೂ ಟಾಕ್ ಆಗುತ್ತಿದೆ. ಸ್ಟೈಲಿಷ್ ಡೈರೆಕ್ಟರ್ ಅಂತಾನೇ ಕರೆಯಿಸಿಕೊಂಡಿರುವ ಇಂದ್ರಜಿತ್ ಲಂಕೇಶ್ ನಿರ್ದೇಶನದ ಜೊತೆಗೆ ಅದ್ದೂರಿಯಾಗಿ ನಿರ್ಮಾಣ ಮಾಡಿರೋ ಈ ವರ್ಷದ ಬಹು ನಿರೀಕ್ಷಿತ ಚಿತ್ರ ಗೌರಿ.
ಇತ್ತೀಚೆಗಷ್ಟೇ ಟೀಸರ್ ಹಾಗೂ ಹಾಡುಗಳಿಂದ ಕ್ರೇಜ್ ಹುಟ್ಟಿಸಿರುವ ಗೌರಿ ಚಿತ್ರದಿಂದ ಇಂದ್ರಜಿತ್ ತಮ್ಮ ಮಗ ಸಮರ್ಜಿತ್ ಲಂಕೇಶ್ನನ್ನ ಬಾಲಿವುಡ್ ಶೈಲಿಯಲ್ಲಿ ಇಂಟ್ರಡ್ಯೂಸ್ ಮಾಡ್ತಾ ಇದ್ದಾರೆ. ಗ್ರ್ಯಾಂಡ್ ಮೇಕಿಂಗ್ ಹಾಗೂ ಕಂಟೆಂಟ್ನಿಂದ ಸೌಂಡ್ ಮಾಡುತ್ತಿರುವ ಗೌರಿ ಚಿತ್ರದ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಈ ಚಿತ್ರದ ಇಂಟ್ರಸ್ಟ್ರಿಂಗ್ ವಿಚಾರಗಳನ್ನ ಹಂಚಿಕೊಂಡಿದ್ದಾರೆ.
ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾತನಾಡಿ, ಟೀಸರ್ ನೋಡಿದವರೆಲ್ಲ ಇದೊಂದು ಆ್ಯಕ್ಷನ್ ಸಿನಿಮಾ ಅಂತಾ ಅಂದುಕೊಂಡಿದ್ದಾರೆ. ಆದರೆ ಗೌರಿ ಒಂದು ಆ್ಯಕ್ಷನ್ ಚಿತ್ರವಲ್ಲ, ಮ್ಯೂಸಿಕಲ್ ಸಿನಿಮಾ. ಇದರಲ್ಲಿ ಪ್ರೀತಿ ಇದೆ, ಎಮೋಷನ್ ಇದೆ, ಭರ್ಜರಿ ಆಕ್ಷನ್ ಚಿತ್ರದಲ್ಲಿವೆ ಅಂತಾರೆ.
ಚಿತ್ರಕ್ಕೆ ಎಷ್ಟು ಫೈಟ್‍ಗಳು ಬೇಕೋ ಅವು ಚಿತ್ರದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಯಾರೂ ಮ್ಯೂಸಿಕಲ್ ಸಿನಿಮಾಗಳನ್ನು ಮಾಡುವುದಿಲ್ಲ. ಅಂಥ ಚಿತ್ರ ಮಾಡಬೇಕೆಂದರೆ ಬಜೆಟ್ ಹೆಚ್ಚಾಗುತ್ತದೆ. ಚಿತ್ರೀಕರಣ, ಸಂಗೀತ ಸಂಯೋಜನೆ, ಸೆಟ್, ಫಾರಿನ್ ಚಿತ್ರೀಕರಣ, ಡ್ಯಾನ್ಸರ್ಸ್ ಇವೆಲ್ಲದರಿಂದ ಬಜೆಟ್ ವಿಪರೀತ ಹೆಚ್ಚಾಗುತ್ತದೆ. ಅದೇ ಕಾರಣಕ್ಕೆ ಸಿನಿಮಾಗಳಲ್ಲಿ ಹಾಡುಗಳನ್ನು ಬಳಸಿಕೊಳ್ಳುವುದೇ ಕಡಿಮೆಯಾಗಿದೆ. ನಾನು ಆ ಬಗ್ಗೆ ಯೋಚಿಸಲಿಲ್ಲ ಎಂದಿದ್ದಾರೆ.
ಈ ಚಿತ್ರದಲ್ಲಿ ಏಳು ಹಾಡುಗಳು ಇರುತ್ತವೆ ಎನ್ನುವ ಅವರು, ಕಥೆಗೆ ಬೇಕಾಗಿದ್ದರಿಂದ ಏಳು ಹಾಡುಗಳನ್ನಿಟ್ಟಿದ್ದೇನೆ. 4 ಜನ ಸಂಗೀತ ನಿರ್ದೇಶಕರು, 14 ಗಾಯಕರು, ಐವರು ಗೀತರಚನೆಕಾರರು ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಸಹಜವಾಗಿಯೇ ಬಜೆಟ್ ಜಾಸ್ತಿ ಆಗಿದೆ. ಒಬ್ಬ ಹೊಸ ಹೀರೋಗೆ ಯಾರೂ ಇಷ್ಟು ದೊಡ್ಡ ಬಜೆಟ್ ಹಾಕಿ ಸಿನಿಮಾ ಮಾಡುವುದಿಲ್ಲ. ನನ್ನ ಮಗ ಎಂದು ಇಷ್ಟು ಬಜೆಟ್ ಹಾಕಿಲ್ಲ. ಕಥೆಗೆ ಅವಶ್ಯಕತೆ ಇತ್ತು. ಹಾಗಾಗಿ ಸಿನಿಮಾ ರಿಚ್ ಆಗಿ ಬಂದಿದೆ ಎಂದರು.