''ಮಾರಿಗೋಲ್ಡ್'' ಹೆಸರಿನ ಮೇಲೆ ಸ್ಯಾಂಡಲ್ವುಡ್ನಲ್ಲಿ ಸಿನಿಮಾವೊಂದು ನಿರ್ಮಾಣವಾಗಿದೆ. ದೂದ್ ಪೇಡಾ ದಿಗಂತ್ ಹಾಗೂ ಬಿಗ್ ಬಾಸ್ ಖ್ಯಾತಿಯ ಸಂಗೀತಾ ಶೃಂಗೇರಿ ಸ್ಕ್ರೀನ್ ಶೇರ್ ಮಾಡಿರುವ ಚಿತ್ರವಿದು. ಗೋಲ್ಡ್ ಬಿಸ್ಕತ್ ಮಾರಲು ಹೊರಟ ನಾಲ್ವರು ಹುಡುಗರ ಕಥೆಯಿದು. ರಘುವರ್ಧನ್ ನಿರ್ಮಾಣದ 'ಮಾರಿಗೋಲ್ಡ್' ಬಿಡುಗಡೆಗೆ ಸಜ್ಜಾಗಿದ್ದು, ಇತ್ತೀಚೆಗೆ ಟ್ರೇಲರ್ ಅನಾವರಣಗೊಂಡಿದೆ.
ಸೂಪರ್ ಹಿಟ್ ಸಿನಿಮಾ 777 ಚಾರ್ಲಿ ಖ್ಯಾತಿಯ ಸಂಗೀತಾ ಶೃಂಗೇರಿ ಹಾಗೂ ಸ್ಯಾಂಡಲ್ವುಡ್ನ ಜನಪ್ರಿಯ ನಟ ದಿಗಂತ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಯಶ್ ಶೆಟ್ಟಿ, ಕಾಕ್ರೋಚ್ ಸುಧೀ ಸೇರಿ 4 ಭಿನ್ನ ಪಾತ್ರಗಳ ಮೇಲೆ ಇಡೀ ಕಥೆ ಸುತ್ತುತ್ತದೆ. ಸಂಪತ್ ಮೈತ್ರೇಯಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಟ್ರೇಲರ್ ರಿಲೀಸ್ ಈವೆಂಟ್ನಲ್ಲಿ ಮಾತನಾಡಿದ ನಿರ್ದೇಶಕ ರಾಘವೇಂದ್ರ ಎಂ.ನಾಯ್ಕ್, ಈ ಚಿತ್ರ ಆಗಲು ನಿರ್ಮಾಪಕ ರಘುನಂದನ್, ದಿಗಂತ್ ಹಾಗೂ ವಿಜಯ್ ಭರಮಸಾಗರ ಕಾರಣ. ಹಲವು ವರ್ಷಗಳಿಂದ ಜೊತೆಯಾಗಿ ಕೆಲಸ ಮಾಡಿದ ಕಲಾವಿದರೇ ಇದರಲ್ಲಿದ್ದರಿಂದ ಎಲ್ಲೂ ತೊಂದರೆಯಾಗಲಿಲ್ಲ ಎಂದು ತಿಳಿಸಿದರು.
ನಟ ದಿಗಂತ್ ಮಾತನಾಡಿ, ನಿರ್ದೇಶಕ ರಘು ಜೊತೆ ಹಿಂದೆಯೇ ಕೆಲಸ ಮಾಡಬೇಕಿತ್ತು. ಚಿತ್ರಕ್ಕಾಗಿ ಬಹಳ ಕಷ್ಟಪಟ್ಟಿದ್ದೇವೆ. ಹೊಗೆ ಧೂಳಿನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಒಮ್ಮೊಮ್ಮೆ ಏಳೆಂಟು ಟೇಕ್ ಆಗುತ್ತಿತ್ತು. ಚಿತ್ರ ನೋಡಿದಾಗ ಏಕೆ ಅಷ್ಟೊಂದು ಟೇಕ್ ತೆಗೆದುಕೊಂಡರು ಎನ್ನುವುದು ಗೊತ್ತಾಯಿತು. ನಾನೇನಾ ಅಭಿನಯಿಸಿರುವುದು ಎನಿಸಿತು. ನನ್ನ ಬೆನ್ನನ್ನು ನಾನೇ ತಟ್ಟಿಕೊಂಡು ಖುಷಿ ಪಟ್ಟೆ. ನಿರ್ಮಾಪಕರು ಬಹಳ ತಿಳಿದುಕೊಂಡಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟಿದ್ದಾರೆ. ವೀರಸಮರ್ಥ ಒಳ್ಳೆ ಸಾಂಗ್ ಕೊಟ್ಟಿದ್ದಾರೆ ಎಂದು ತಿಳಿಸಿದರು.