ಹೈದರಾಬಾದ್: ದಕ್ಷಿಣ ಚಿತ್ರರಂಗದ ಖ್ಯಾತ ನಟ ಧನುಷ್ ಅವರ ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ (ಟಿಎಫ್‌ಪಿಸಿ) ಜೊತೆಗಿನ ಸಮಸ್ಯೆ ಇತ್ಯರ್ಥಗೊಂಡಿದೆ. ನಟನ ಮೇಲಿದ್ದ ನಿಷೇಧ ತೆರವುಗೊಂಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಸೌತ್ ಸೂಪರ್ಸ್ಟಾರ್ ಹೊಸ ಸಿನಿಮಾ ಘೋಷಣೆಯಾಗಿದೆ.
ಇಂದು 'ಡಾನ್ ಪಿಕ್ಚರ್ಸ್' ಸೋಷಿಯಲ್ ಮೀಡಿಯಾದಲ್ಲಿ ಧನುಷ್ ಮುಖ್ಯಭೂಮಿಕೆಯ ಮುಂದಿನ ಸಿನಿಮಾ ಅನೌನ್ಸ್ ಮಾಡಿದೆ. ಚಲನಚಿತ್ರ ನಿರ್ಮಾಣ ಸಂಸ್ಥೆ 'ಡಾನ್ ಪಿಕ್ಚರ್ಸ್'ನ ಚೊಚ್ಚಲ ಚಿತ್ರವಿದು. ತಾತ್ಕಾಲಿಕವಾಗಿ ಇದನ್ನು 'D52' ಎಂದು ಹೆಸರಿಸಲಾಗಿದೆ. ಟಿಎಫ್‌ಪಿಸಿ ಜೊತೆಗಿದ್ದ ಸಮಸ್ಯೆ ಪರಿಹಾರಗೊಂಡ ನಂತರ ಇದು ನಟನ ಗಮನಾರ್ಹ ಬೆಳವಣಿಗೆ ಅಂತಲೇ ಹೇಳಬಹುದು.
ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಪೋಸ್ಟ್ ಶೇರ್ ಮಾಡಿರುವ ಡಾನ್ ಪಿಕ್ಚರ್ಸ್, "ಹೊಸ ಆರಂಭ. ಡಾನ್ ಪಿಕ್ಚರ್ಸ್ ಅಬ್ಬರದಿಂದ ಪ್ರಾರಂಭವಾಗುತ್ತಿದೆ. ನಮ್ಮ ಮೊದಲ ಪ್ರಾಜೆಕ್ಟ್ - ಧನುಷ್ ಸರ್ ನಟನೆಯ D52 ಅನ್ನು ಘೋಷಿಸಲು ಹೆಮ್ಮೆಯಾಗುತ್ತಿದೆ" ಎಂದು ಬರೆದುಕೊಂಡಿದೆ. ಧನುಷ್ ಅವರ ವಂಡರ್‌ಬಾರ್ ಫಿಲ್ಮ್ಸ್ ಈ ಸಿನಿಮಾವನ್ನು ಸಹ - ನಿರ್ಮಾಣ ಮಾಡಲಿದೆ. ಡಿ52 ಚಿತ್ರದ ತಾರಾಗಣ, ಸಿಬ್ಬಂದಿ ಮತ್ತು ನಿರ್ದೇಶಕರ ವಿವರಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.
ಇಗಾಗಲೇ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಮನರಂಜನಾ ಕ್ಷೇತ್ರಕ್ಕೆ ಕೊಟ್ಟಿರುವ ಬಹುಬೇಡಿಕೆ ನಟ ಧನುಷ್ ಅವರ ಕೈಯಲ್ಲೀಗ ಹಲವು ಬಹುನಿರೀಕ್ಷಿತ ಚಿತ್ರಗಳಿವೆ. 'ನಿಲವುಕು ಎನ್ ಮೆಲ್ ಎನ್ನಡಿ ಕೋಬಂ' ಎಂಬ ರೊಮ್ಯಾಂಟಿಕ್ ಕಾಮಿಡಿ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಜುಲೈನಲ್ಲಿ ತಾವು ನಿರ್ದೇಶಿಸಿ ನಟಿಸಿದ್ದ ರಾಯನ್ ಸಿನಿಮಾ ತೆರೆಕಂಡಿದೆ. ಸಂದೀಪ್ ಕಿಶನ್ ಮತ್ತು ಕಾಳಿದಾಸ್ ಜಯರಾಮ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದರು. ಸಿನಿಮಾ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ.