ಓಂಗೋಲ್ (ಆಂಧ್ರಪ್ರದೇಶ): ಕಳೆದ ಚುನಾವಣೆಗೂ ಮುನ್ನ ರಾಜಕೀಯ ನಾಯಕರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಚಲನಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇಂದು ಓಂಗೋಲ್ ಗ್ರಾಮೀಣ ಪೊಲೀಸರ ಎದುರು ಹಾಜರಾಗಲಿದ್ದಾರೆ.
ರಾಜಕೀಯ ನಾಯಕರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ:ಮಡ್ಡಿಪಾಡು ಮಂಡಲದ ಟಿಡಿಪಿ ಪ್ರಧಾನ ಕಾರ್ಯದರ್ಶಿ ಎಂ.ರಾಮಲಿಂಗಂ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ವರ್ಮಾ ಅವರು ಆಗಿನ ವಿರೋಧ ಪಕ್ಷದ ನಾಯಕ ಮತ್ತು ಹಾಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಸಚಿವ ನಾರಾ ಲೋಕೇಶ್ ಅವರನ್ನು ಗುರಿಯಾಗಿಸಿಕೊಂಡು ಸೋಷಿಯಲ್ ಮೀಡಿಯಾ ಪೋಸ್ಟ್‌ಗಳನ್ನು ಶೇರ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಚುನಾವಣಾ ಪ್ರಚಾರದ ಸಮಯದಲ್ಲಿ, ವರ್ಮಾ ವೈಎಸ್ಆರ್ ಕಾಂಗ್ರೆಸ್ ಪಕ್ಷವನ್ನು (ವೈಎಸ್ಆರ್‌ಸಿಪಿ) ಬೆಂಬಲಿಸಿ ರಾಜಕೀಯ ಚಿತ್ರವನ್ನು ನಿರ್ದೇಶಿಸುತ್ತಿದ್ದಾಗ ಈ ಪೋಸ್ಟ್‌ಗಳನ್ನು ಮಾಡಲಾಗಿದೆ ಎಂಬ ಆರೋಪ ಇದೆ.
ಕಾನೂನು ಹೋರಾಟ: ಈ ಹಿಂದೆ, ಜಿಲ್ಲಾ ಪೊಲೀಸರು ವರ್ಮಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಅದಾಗ್ಯೂ, ನಿರ್ದೇಶಕರು ತಾವು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಮುಂದಿನ ದಿನಾಂಕದಲ್ಲಿ ಹಾಜರಾಗುವುದಾಗಿ ವಾಟ್ಸ್ಆ್ಯಪ್ ಮೂಲಕ ಪ್ರತಿಕ್ರಿಯಿಸಿದ್ದರು. ಇದರ ಹೊರತಾಗಿಯೂ, ಅವರು ಹಾಜರಾಗಲು ವಿಫಲರಾದರು.
'ತಮ್ಮ ವಿರುದ್ಧದ ಎಫ್‌ಐಆರ್ ರಾಜಕೀಯ ಪ್ರೇರಿತ': ಪೊಲೀಸರು ಅವರನ್ನು ಬಂಧಿಸುವ ಪ್ರಯತ್ನಗಳನ್ನು ತೀವ್ರಗೊಳಿಸುತ್ತಿದ್ದಂತೆ, ವರ್ಮಾ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ. ಈ ಸಮಯದಲ್ಲಿ, ಅವರು ನ್ಯಾಯಾಲಯದಲ್ಲಿ ಕ್ವ್ಯಾಶ್ ಪಿಟಿಶನ್ ಸಲ್ಲಿಸಿದ್ದರು. ತಮ್ಮ ವಿರುದ್ಧದ ಎಫ್‌ಐಆರ್ ಅನ್ಯಾಯ, ರಾಜಕೀಯ ಪ್ರೇರಿತವಾಗಿದೆ ಎಂದು ವಾದಿಸಿದ್ದರು.