'ಡೆವಿಲ್: ದಿ ಹೀರೋ' ಈ ಟೈಟಲ್ ಅನೌನ್ಸ್ ಆಗುತ್ತಿದ್ದಂತೆ ಸ್ಯಾಂಡಲ್ವುಡ್ನಲ್ಲಿ ಸಖತ್ ಟಾಕ್ ಆಗಿತ್ತು. ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಬಾಕ್ಸ್ ಆಫೀಸ್ ಸುಲ್ತಾನ ಖ್ಯಾತಿಯ ದರ್ಶನ್ ಇರುವ ಹಿನ್ನೆಲೆ ಬಿಸಿನೆಸ್ ವಿಚಾರವಾಗಿ ಗಾಂಧಿನಗರದಲ್ಲಿ ಒಂದಿಷ್ಟು ಲೆಕ್ಕಾಚಾರ ಶುರುವಾಯ್ತು. 'ಕಾಟೇರ' ಯಶಸ್ಸಿನ ಬಳಿಕ ದರ್ಶನ್ ಅಭಿನಯಿಸುತ್ತಿರುವ ಹೈ ಬಜೆಟ್ ಸಿನಿಮಾವಿದು.
ಖುಷಿ, ರಿಷಿ, ಮಿಲನ, ವಂಶಿಯಂತಹ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಪ್ರಕಾಶ್ ವೀರ್, 'ಡೆವಿಲ್' ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅಂದುಕೊಂಡಂತೆ ಈ ಚಿತ್ರದ ಪೂಜೆಯಿಂದ ಹಿಡಿದು, ಚಿತ್ರದ ಫಸ್ಟ್ ಗ್ಲಿಂಪ್ಸ್ ಅನ್ನೂ ಅನಾವರಣಗೊಳಿಸಿದ್ದರು. ಗ್ಲಿಂಪ್ಸ್ ಕನ್ನಡ ಚಿತ್ರರಂಗವಲ್ಲದೇ ಬಹುಭಾಷೆಗಳಲ್ಲಿಯೂ ಸಖತ್ ಸದ್ದು ಮಾಡಿತ್ತು.
ಅಂದುಕೊಂಡಂತೆ, ದರ್ಶನ್ ಅವರನ್ನು ಒಳಗೊಂಡು ಶೇ.25ರಿಂದ 30ರಷ್ಟು ಚಿತ್ರೀಕರಣವನ್ನು ಚಿತ್ರತಂಡ ಪೂರ್ಣಗೊಳಿಸಿತ್ತು. ಆದರೆ, ಕಳೆದ ತಿಂಗಳು ದರ್ಶನ್, ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಅರೆಸ್ಟ್ ಆದರು. ಅಲ್ಲಿಂದ ನಿರ್ದೇಶಕ ಕಮ್ ನಿರ್ಮಾಪಕ ಪ್ರಕಾಶ್ ವೀರ್ ಅವರಿಗೆ ಚಿಂತೆ ಶುರುವಾಗಿದೆ.
ದರ್ಶನ್ ಬಂಧನವಾಗಿ ಒಂದೂವರೆ ತಿಂಗಳಾಗುತ್ತಾ ಬಂತು. ಮತ್ತೊಂದೆಡೆ, ದರ್ಶನ್ ಅವರಿಗೆ ಬೇಲ್ ಸಿಗೋದು ಯಾವಾಗ ಅನ್ನೋದು ಗೊತ್ತಿಲ್ಲ. ಒಂದು ವೇಳೆ ಬೇಲ್ ಸಿಕ್ರೂ ಶೂಟಿಂಗ್ ಶುರುವಾಗಲ್ಲ. ಈ ಸಿನಿಮಾದ ಶೂಟಿಂಗ್ ಬಹುತೇಕ ಹೊರದೇಶದಲ್ಲೇ ನಡೆಯಬೇಕಿದೆ. 30 ದಿನಗಳ ಕಾಲ ಬ್ಯಾಂಕಾಕ್ನಲ್ಲಿ ಶೂಟಿಂಗ್ ಪ್ಲ್ಯಾನ್ ಮಾಡಿದ್ದ ನಿರ್ದೇಶಕ ಪ್ರಕಾಶ್ಗೆ ನಾಯಕ ನಟನ ಬಂಧನ ತಲೆನೋವಾಗಿ ಪರಿಣಮಿಸಿದೆ.