ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 47ನೇ ಜನ್ಮದಿನವನ್ನು ಅಭಿಮಾನಿಗಳು ಮತ್ತು ಸಿನಿಮೋದ್ಯಮದ ಸ್ನೇಹಿತರ ಜೊತೆ ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ನಿನ್ನೆ ಮಧ್ಯರಾತ್ರಿಯಿಂದಲೇ ಆಚರಣೆಗಳು ಆರಂಭವಾಗಿದ್ದು, ಇಂದೂ ಕೂಡ ಮುಂದುವರಿದಿದೆ.
ಕನ್ನಡ ಚಿತ್ರರಂಗದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವವರ ಪೈಕಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಮುಖರು. ಕೋಟ್ಯಂತರ ಅಭಿಮಾನಿಗಳ ಪೈಕಿ, ಹೆಚ್ಚಿನವರು ದರ್ಶನ್ ಅಂದ್ರೆ ದೇವರೇಂದೇ ಆರಾಧಿಸುವುದೂ ಉಂಟು. ಅವರ ಸಿನಿಮಾ ಬಂತಂದ್ರೆ ಹಬ್ಬ, ಜಾತ್ರೆಯಂತೆ ಸಂಭ್ರಮಿಸುತ್ತಾರೆ. ಇನ್ನೂ ದರ್ಶನ್ ಹುಟ್ಟುಹಬ್ಬ ಅಂದ್ರೆ ಕೇಳಬೇಕೇ?.
ನಿನ್ನೆ ರಾತ್ರಿಯಿಂದಲೇ ದರ್ಶನ್ ಅವರ ಸಿನಿಸ್ನೇಹಿತರು ಅವರ ಜನ್ಮದಿನವನ್ನು ಹಬ್ಬದ ರೀತಿಯೇ ಆಚರಿಸಿದ್ದಾರೆ. ಗುರುವಾರ ಮಧ್ಯರಾತ್ರಿ ಎರಡು ಗಂಟೆವರೆಗೂ ದರ್ಶನ್ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳ ಜೊತೆ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಇಂದು ಕೂಡ ದರ್ಶನ್ ತಮಗಾಗಿ ದೂರದ ಊರಿನಿಂದ ಬಂದ ಅಭಿಮಾನಿ ದೇವರುಗಳಿಗೆ ದರ್ಶನ ಕೊಟ್ಟಿದ್ದಾರೆ. ಜೊತೆಗೆ ನಟನ ಮುಂಬರುವ ಬಹುನಿರೀಕ್ಷಿತ ಚಿತ್ರ ''ಡೆವಿಲ್''ನ ಗ್ಲಿಂಪ್ಸ್ ಕೂಡ ಅನಾವರಣಗೊಂಡಿದೆ.
ಅಭಿಮಾನಿಗಳಿಗೆ ಭರ್ಜರಿ ಬರ್ತ್‌ಡೇ ಊಟ: ದರ್ಶನ್ ಅವರ ಹುಟ್ಟುಹಬ್ಬದಂದು ಅವರನ್ನು ನೋಡಬೇಕು, ಅವರಿಗೆ ವಿಶ್ ಮಾಡಿ ಅವರ ಜೊತೆ ಫೋಟೋ ತೆಗೆಸಿಕೊಳ್ಳಬೇಕು ಎಂಬ ಆಸೆಯಲ್ಲೇ ಅಪಾರ ಸಂಖ್ಯೆಯ ಅಭಿಮಾನಿಗಳು ರಾಜ್ಯದ ಮೂಲೆಮೂಲೆಗಳಿಂದ ಬರುತ್ತಾರೆ. ತಮಗಾಗಿ ಬರುವವರು ಹಸಿದ ಹೊಟ್ಟೆಯಲ್ಲಿ ಹೋಗಬಾರದು ಎಂದು ನಾಲ್ಕೈದು ಬಗೆಯ ಖಾದ್ಯಗಳೊಂದಿಗೆ ಊಟದ ವ್ಯವಸ್ಥೆ ಮಾಡಿಸಿದ್ರು. ಟೊಮೆಟೊ ಬಾತ್, ವೆಜಿಟೇಬಲ್ ಪಲಾವ್, ಅನ್ನ ಸಾಂಬಾರ್, ಮೊಸರನ್ನ, ಮೆಣಸಿನಕಾಯಿ ಬಜ್ಜಿ, ಮೈಸೂರು ಪಾಕ್ ಹೀಗೆ ಊಟದ ವ್ಯವಸ್ಥೆಯೂ ನಡೆದಿತ್ತು. ದರ್ಶನ್ ತಮ್ಮ ಅಭಿಮಾನಿಗಳಿಗೆ, ಎಲ್ಲರೂ ಹುಷಾರಾಗಿ ಇರುವಂತೆ ಮನವಿ ಮಾಡಿಕೊಂಡರು.