ಡಾಲಿ ಧನಂಜಯ್, ಸ್ಯಾಂಡಲ್ವುಡ್ನ ಬಹುಬೇಡಿಕೆ ನಟ. ನಿರ್ಮಾಪಕ ಕೂಡಾ ಹೌದು. ತಮ್ಮ 'ಡಾಲಿ ಪಿಕ್ಚರ್ಸ್' ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಾರೆ. ಕಂಟೆಂಟ್ ಅಧಾರಿತ ಸಿನಿಮಾಗಳಿಗೆ ಸಂಪೂರ್ಣ ಬೆಂಬಲ ಕೊಡುತ್ತಾರೆ. ಇವರ ಅಭಿನಯ ಅಮೋಘ. ಹೀಗೆ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಸ್ಟಾರ್ಡಮ್ ಹೊಂದಿರುವ ನಟ ನಿರ್ಮಾಣ ಮಾಡುತ್ತಿರುವ ಮುಂದಿನ ಬಹುನಿರೀಕ್ಷಿತ ಚಿತ್ರ 'ವಿದ್ಯಾಪತಿ'.
ಹೌದು, ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಒಡೆತನದ ಚಲನಚಿತ್ರ ನಿರ್ಮಾಣ ಸಂಸ್ಥೆ 'ಡಾಲಿ ಪಿಕ್ಚರ್ಸ್' ನಿರ್ಮಾಣ ಮಾಡುತ್ತಿರುವ ನಾಲ್ಕನೇ ಸಿನಿಮಾ ''ವಿದ್ಯಾಪತಿ''. ಶೀರ್ಷಿಕೆಯಿಂದಲೇ ಸಿನಿಪ್ರಿಯರ ಕುತೂಹಲ ದುಪ್ಪಟ್ಟು ಮಾಡಿರುವ ಈ ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದೆ. ಇತ್ತೀಚೆಗಷ್ಟೇ 'ವಿದ್ಯಾಪತಿ'ಗೆ ಕುಂಬಳಕಾಯಿ ಪ್ರಾಪ್ತಿಯಾಗಿದೆ. ''ಟಗರು ಪಲ್ಯ'' ಮೂಲಕ ಮಸ್ತ್ ಮನರಂಜನೆ ನೀಡಿದ್ದ ನಾಗಭೂಷಣ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, 'ಉಪಾಧ್ಯಕ್ಷ'ನ ಬೆಡಗಿ ಮಲೈಕಾ ವಸೂಪಾಲ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಕರಾಟೆ ಕಿಂಗ್ ಗೆಟಪ್ನಲ್ಲಿ ನಾಗಭೂಷಣ್ ಕಾಣಿಸಿಕೊಳ್ಳುತ್ತಿದ್ದು, ಅವರಿಗೆ ಮಾಸ್ಟರ್ ಆಗಿ ಹಿರಿಯ ನಟ ರಂಗಾಯಣ ರಘು ಅಭಿನಯಿಸಿದ್ದಾರೆ.
ಈ ಹಿಂದೆ ಇಕ್ಕಟ್ ಸಿನಿಮಾ ಮೂಲಕ ಭರವಸೆ ಹುಟ್ಟಿಸಿದ್ದ ಇಶಾಂ ಮತ್ತು ಹಸೀಂ ಖಾನ್ ''ವಿದ್ಯಾಪತಿ'' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ, ಸಿನಿಮಾವನ್ನು ಇವರೇ ಬರೆದು, ಸಂಕಲನದ ಜವಾಬ್ದಾರಿಯನ್ನೂ ತಾವೇ ಹೊತ್ತುಕೊಂಡಿದ್ದಾರೆ. ಚಿತ್ರಕ್ಕೆ ಲವಿತ್ ಅವರ ಛಾಯಾಗ್ರಹಣ ಇದೆ. ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆ್ಯಕ್ಷನ್ ವಿದ್ಯಾಪತಿ ಸಿನಿಮಾಗಿದೆ.