ಮೇರು ಯೋಧ ಮತ್ತು ಬೆಂಗಳೂರಿನ ಕಾರಣಿಕರ್ತ ನಾಡಪ್ರಭು ಕೆಂಪೇಗೌಡರ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳು ಬರುತ್ತಿವೆ. ಕೆಲ ದಿನಗಳ ಹಿಂದೆ ಸಂಗೀತ ನಿರ್ದೇಶಕ ಧರ್ಮಭೀರು ನಾಡಪ್ರಭು ಕೆಂಪೇಗೌಡ ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ಇದರ ಬೆನ್ನಲೇ ನಿರ್ದೇಶಕ ಟಿ.ಎಸ್ ನಾಗಾಭರಣ 'ನಾಡಪ್ರಭು ಕೆಂಪೇಗೌಡ'ರ ಜೀವನ ಚರಿತ್ರೆಯನ್ನು ಹೇಳಲು ಹೊರಟ್ಟಿದ್ದಾರೆ.
ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಕೆಂಪೇಗೌಡರ ಪಾತ್ರ ನಿರ್ವಹಿಸುತ್ತಿದ್ದು, ಈಗಾಗಲೇ ಪೋಸ್ಟರ್ ರಿವೀಲ್ ಆಗಿದೆ. ಐತಿಹಾಸಿಕ ಲುಕ್ ಎಲ್ಲರ ಗಮನ ಸೆಳೆದಿದೆ. ಈ ಹಿಂದೆ ನಿರ್ದೇಶಕ ನಾಗಾಭರಣ ಜೊತೆ ಧನಂಜಯ್ 'ಅಲ್ಲಮ್ಮ' ಸಿನಿಮಾ ಮಾಡಿದ್ದರು. ಇದೀಗ ಮತ್ತೊಮ್ಮೆ 'ನಾಡಪ್ರಭು ಕೆಂಪೇಗೌಡ' ಚಿತ್ರಕ್ಕೆ ಕೈ ಜೋಡಿಸಿದ್ದಾರೆ. ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟರ್ ಹಂಚಿಕೊಂಡ ನಟ, ''ನಾಡಪ್ರಭು ಕೆಂಪೇಗೌಡರ ಐತಿಹಾಸಿಕ ಅನಾವರಣ..'' ಎಂದು ಬರೆದುಕೊಂಡಿದ್ದಾರೆ.
ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಲಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ. ಚಿತ್ರವನ್ನು ಡಾ.ಎಂ.ಎನ್.ಶಿವರುದ್ರಪ್ಪ ಮತ್ತು ಶುಭಂ ಗುಂಡಲ ಈಶ್ವರ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ನಿರ್ಮಿಸಲಿದ್ದಾರೆ. ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ.