2024ನೇ ಸಾಲಿನ ದಕ್ಷಿಣ ಭಾರತದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭ 'ಸೈಮಾ' ದುಬೈನಲ್ಲಿ ಮುಂದಿನ ತಿಂಗಳು ಸೆಪ್ಟೆಂಬರ್ 14 ಮತ್ತು 15ರಂದು ನಡೆಯಲಿದೆ. ಇದರ ಭಾಗವಾಗಿ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಶುಕ್ರವಾರ ಸಂಜೆ ಮಾಧ್ಯಮಗೋಷ್ಟಿ ಆಯೋಜಿಸಲಾಗಿತ್ತು. ಸೈಮಾ ಅಧ್ಯಕ್ಷರಾದ ಬೃಂದಾ ಪ್ರಸಾದ್, ನಟರಾದ ಡಾಲಿ ಧನಂಜಯ್, ರಿಷಿ, ನಟಿಯರಾದ ನೇಹಾ ಶೆಟ್ಟಿ, ನಿಧಿ ಅಗರ್ವಾಲ್, ಅವಿಕಾ ಗೋರ್, ಶಾನ್ವಿ ಶ್ರೀವಾಸ್ತವ್, ಶುಭ್ರ ಅಯ್ಯಪ್ಪ, ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಸೀನಿಯರ್ ಎಕ್ಸಿಕ್ಯೂಟಿವ್ ಆಫೀಸರ್ ನೊಬುಟಾಕಾ ಸುಜುಕಿ, ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ರಾಯ್ ಸಿಜೆ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಬೃಂದಾ ಪ್ರಸಾದ್ ಮಾತನಾಡಿ, ಈ ಬಾರಿ ನಡೆಯುತ್ತಿರುವುದು 12ನೇ ಆವೃತ್ತಿಯ ಸೈಮಾ. 12 ಕೇವಲ ಸಂಖ್ಯೆಯಲ್ಲ. ಅದೊಂದು ಸುಂದರ ಪಯಣ. ದಕ್ಷಿಣ ಭಾರತದಲ್ಲಿ ಪ್ರತೀ ವರ್ಷ ನಡೆಯುವ ಪ್ರತಿಷ್ಠಿತ ಪ್ರಶಸ್ತಿ ಎಂಬ ಹೆಗ್ಗಳಿಕೆಗೆ ಸೈಮಾ ಭಾಜನವಾಗಿದೆ. ದಕ್ಷಿಣ ಸಿನಿರಂಗದ ಪ್ರತಿಭೆಗಳನ್ನು ಗುರುತಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಭ್ರಮಿಸುವ ಸೈಮಾದಲ್ಲಿ ನಾಲ್ಕು ಭಾಷೆಯ ಚಿತ್ರರಂಗ ಒಂದೇ ಕುಟುಂಬದಂತೆ ಭಾಗಿಯಾಗುತ್ತಾರೆ ಎಂದು ತಿಳಿಸಿದರು.
ನಟ ಡಾಲಿ ಧನಂಜಯ್ ಮಾತನಾಡಿ, ಸೈಮಾ ಎಂದರೆ ನಮಗೆ ಖುಷಿ. ಈ ಬಾರಿ ದುಬೈನಲ್ಲಿ ಮತ್ತೆ ಸೈಮಾ ಪ್ರೋಗ್ರಾಮ್ ನಡೆಯಲಿದೆ. ನನಗೆ ಅದ್ಭುತ ಮೆಮೋರಿ ಕ್ರಿಯೇಟ್ ಮಾಡುವ ವೇದಿಕೆ. ಕಳೆದ ವರ್ಷ ನನ್ನ ಹುಟ್ಟುಹಬ್ಬಕ್ಕೆ ನಮ್ಮ ಚಿತ್ರರಂಗದವರಿಗೆ ಪಾರ್ಟಿ ಕೊಟ್ಟಿದೆ. ಈ ಬಾರಿ ನನಗೆ ಸೈಮಾದಿಂದ ಪಾರ್ಟಿ ಕೊಡುತ್ತಿದ್ದಾರೆ. ಎಲ್ಲಾ ಇಂಡಸ್ಟ್ರಿಯ ಕಲಾವಿದರು, ನಿರ್ದೇಶಕರನ್ನು ನೋಡುವ ಒಂದೊಳ್ಳೆ ವೇದಿಕೆ. ಈ ರೀತಿಯ ಈವೆಂಟ್ ಚೆನ್ನಾಗಿರುತ್ತವೆ. ಲಿರಿಕ್ಸ್ ವಿಭಾಗದಲ್ಲಿ ನನ್ನನ್ನು ನಾಮಿನೇಟ್ ಮಾಡಲಾಗಿದೆ. ಸೈಮಾ ಎನ್ನುವುದು ಒಂದು ಸೆಲೆಬ್ರೆಷನ್ ಎಂದು ಸಂತಸ ಹಂಚಿಕೊಂಡರು.
ನಿಧಿ ಅಗರ್ವಾಲ್ ಮಾತನಾಡಿ, ನಾನು ಇಲ್ಲಿ ಭಾಗಿಯಾಗಿರುವುದು ಖುಷಿ ಕೊಟ್ಟಿದೆ. ಪ್ರತೀ ವರ್ಷ ನಡೆಯುವ ಸೈಮಾ ಸಂಭ್ರಮದಲ್ಲಿ ನಾನು ಭಾಗಿಯಾಗುತ್ತಿದ್ದೇನೆ. ಸೈಮಾ ಎನ್ನುವುದು ಅಮೇಜಿಂಗ್ ಶೋ. ಸೈಮಾದಲ್ಲಿ ಎಲ್ಲರನ್ನೂ ನೋಡುವುದೇ ಖುಷಿ ಎಂದರು.
ಶಾನ್ವಿ ಶ್ರೀವಾಸ್ತವ್ ಮಾತನಾಡಿ, ಸೈಮಾ ಎನ್ನುವುದು ಹೋಳಿ, ದೀಪಾವಳಿ ಹಬ್ಬದಂತೆ. ಪ್ರತೀ ವರ್ಷದಂತೆ ಈ ಬಾರಿಯೂ ಸೈಮಾ ಮತ್ತೆ ಬಂದಿದೆ. ಸೆಲೆಬ್ರೆಟ್ ಮಾಡಲು ಕಾಯುತ್ತಿದ್ದೇವೆ. ಎಲ್ಲಾ ಇಂಡಸ್ಟ್ರಿಯ ಸೆಲೆಬ್ರಿಟಿಗಳು ಒಂದೇ ಜಾಗದಲ್ಲಿ ಒಂದೇ ಸಮಾರಂಭದಲ್ಲಿ ಭಾಗಿಯಾಗಿ ಸಿನಿಮಾವನ್ನು ಸಂಭ್ರಮಿಸುತ್ತೇವೆ ಎಂದು ತಿಳಿಸಿದರು.