2023ರ ಕೊನೆಯಲ್ಲಿ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ನಕಲಿ ವಿಡಿಯೋ ವೈರಲ್ ಆಗಿ ಸಂಚಲನ ಸೃಷ್ಟಿಸಿತ್ತು. ವಿವಿಧ ಕ್ಷೇತ್ರಗಳ ಗಣ್ಯರು ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದರು. ಸರ್ಕಾರ ಕೂಡ ಸ್ಪಂದಿಸಿ, ಪೊಲೀಸರು ತನಿಖೆ ಆರಂಭಿಸಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಅರೆಸ್ಟ್ ಮಾಡಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ 'ಕಿರಿಕ್ ಪಾರ್ಟಿ' ಸಿನಿಮಾ ಖ್ಯಾತಿಯ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಬಂಧಿಸಿರುವುದಾಗಿ ದೆಹಲಿ ಪೊಲೀಸರು ಇಂದು ಮಾಹಿತಿ ನೀಡಿದ್ದಾರೆ. ಫೇಕ್ ವಿಡಿಯೋದ ಸೃಷ್ಟಿಕರ್ತ ಎಂದು ಶಂಕಿಸಲಾಗಿರುವ ಆರೋಪಿಯನ್ನು ಬಂಧಿಸಲಾಗಿದೆ. ದಕ್ಷಿಣ ಭಾರತದ ಪ್ರದೇಶವೊಂದರಲ್ಲಿ ಬಂಧಿಸಲಾಗಿದ್ದು, ದೆಹಲಿಗೆ ಕರೆತರಲಾಗಿದೆ. ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2023ರ ನವೆಂಬರ್ 10 ರಂದು ದೆಹಲಿ ಪೊಲೀಸ್ನ ಸ್ಪೆಷಲ್ ಸೆಲ್ನ ಇಂಟೆಲಿಜೆನ್ಸ್ ಫ್ಯೂಷನ್ ಆ್ಯಂಡ್ ಸ್ಟ್ರಾಟೆಜಿಕ್ ಆಪರೇಷನ್ಸ್ (IFSO) ಘಟಕದಲ್ಲಿ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 465 (ಫೋರ್ಜರಿಗೆ ಶಿಕ್ಷೆ) ಮತ್ತು 469 (ಪ್ರತಿಷ್ಠೆಗೆ ಹಾನಿ ಮಾಡುವ ಉದ್ದೇಶದಿಂದ ನಕಲಿ ನಿರ್ಮಾಣ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಸಿ ಮತ್ತು 66ಇ ಅಡಿ ಎಫ್‌ಐಆರ್ ದಾಖಲಿಸಲಾಗಿತ್ತು. ಎಫ್‌ಐಆರ್ ದಾಖಲಿಸಿದ ಕೂಡಲೇ ಐಎಫ್‌ಎಸ್‌ಒ ಯುನಿಟ್, ಫೇಕ್ ವಿಡಿಯೋದ ಯುಆರ್‌ಎಲ್ ಸೇರಿದಂತೆ ಇತರ ವಿವರಗಳನ್ನು ಕೊಡುವಂತೆ 'ಮೆಟಾ' ಸಂಸ್ಥೆಗೆ ಪತ್ರ ಬರೆದಿತ್ತು. ನಕಲಿ ವಿಡಿಯೋ ಸೃಷ್ಟಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವ್ಯಕ್ತಿಯನ್ನು ಕಂಡುಹಿಡಿಯೋ ಸಲುವಾಗಿ ಈ ಮಾಹಿತಿಗಳನ್ನು ಕೇಳಿತ್ತು.