ಬಿಗ್ ಬಾಸ್, ವ್ಯಕ್ತಿತ್ವಗಳ ಆಟ. ಒಂದೊಳ್ಳೆ ವ್ಯಕ್ತಿತ್ವದ ಗೆಲುವು ನಿರ್ಧಾರ ಮಾಡೋದು ಪ್ರೇಕ್ಷಕ ಪ್ರಭುಗಳು. ಬಿಗ್ ಬಾಸ್ ಅನ್ನೋದೇ ಒಂದು ಎಮೋಷನ್. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರೋ ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ. ಅಭಿನಯ ಚಕ್ರವರ್ತಿ ಸುದೀಪ್ ಈ ಶೋನ ಹೈಲೆಟ್. ಫೈನಲಿ, ಸೀಸನ್ 11ರ ಗ್ರ್ಯಾಂಡ್ ಫಿನಾಲೆ ಬಂದೇ ಬಿಡ್ತು. ವಿಜೇತರು ಯಾರೆಂಬುದನ್ನು ತಿಳಿದುಕೊಳ್ಳಲು ಕ್ಷಣಗಣನೆ ಆರಂಭವಾಗಿದ್ದು, ಕನ್ನಡಿಗರ ಕುತೂಹಲ ಗರಿಗೆದರಿದೆ.
ಕಿಚ್ಚ ರೆಡಿ ಆಗಾಯ್ತು, ಕಿಚ್ಚೆಬ್ಬಿಸೋ ರಿಸಲ್ಟ್ ಮಾತ್ರ ಬಾಕಿ! ಬಿಗ್ ಬಾಸ್ ಕನ್ನಡ 11 ಗ್ರ್ಯಾಂಡ್ ಫಿನಾಲೆ, ಇಂದು-ನಾಳೆ ಸಂಜೆ 6ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನಡಿ ವಿವಿಧ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಪ್ರೋಮೋ ಅನಾವರಣಗೊಂಡಿದೆ. ಅದ್ಧೂರಿ ವೇದಿಕೆಗೆ ಕಿಚ್ಚು ಹಚ್ಚಿದ್ದಾರೆ ಕಿಚ್ಚ. ಪ್ರೋಮೋದಲ್ಲಿ ತಮ್ಮ ಇತ್ತೀಚೆಗೆ ಬಿಡುಗಡೆಯಾಗಿ ಯಶಸ್ಸು ಕಂಡಿರುವ ಮ್ಯಾಕ್ಸ್ ಸಿನಿಮಾ ಸಾಂಗ್ಗೆ ಹೆಜ್ಜೆ ಹಾಕಿದ್ದಾರೆ. ಸಿನಿಮಾದ ಸ್ಟೆಪ್ಪೇ ಈ ಸ್ಟೇಜ್ನಲ್ಲೂ ಹಾಕಿದ್ದು, ಗ್ರ್ಯಾಂಡ್ ಫಿನಾಲೆ ಭರ್ಜರಿಯಾಗಿ ಮೂಡಿ ಬರಲಿದೆ ಅನ್ನೋದು ಸ್ಪಷ್ಟವಾಗಿದೆ.
ಸುದೀಪ್ ನಿರೂಪಣೆಯಲ್ಲಿ ಬರುವ ಈ ಕಾರ್ಯಕ್ರಮ ತನ್ನದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದೆ. ಶನಿವಾರ ಮತ್ತು ಭಾನುವಾದ ಎಪಿಸೋಡ್ ನೋಡಲೆಂದೇ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಅಷ್ಟರ ಮಟ್ಟಿಗೆ ಇವರ ನಿರೂಪಣಾ ಶೈಲಿ ಫೇಮಸ್ ಆಗಿದೆ. ವಾರದಲ್ಲಿ ನಡೆದಿರೋ ಸರಿ ತಪ್ಪುಗಳನ್ನು ಚರ್ಚಿಸಿ, ಸ್ಪರ್ಧಿಗಳನ್ನು ತಿದ್ದಿ ತೀಡೋ ಕೆಲಸವನ್ನು ಸುದೀಪ್ ಮಾಡ್ತಾರೆ. ಆದ್ರೆ ಸೀಸನ್ 11 ಸುದೀಪ್ ಅವರ ಕೊನೆ ಸೀಸನ್ ಅನ್ನೋದು ಮಾತ್ರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಹೆಚ್ಚಿನ ಸಿನಿಮಾಗಳನ್ನು ಪ್ರೇಕ್ಷಕರಿಗೆ ಪೂರೈಸುವ ಪಣ ತೊಟ್ಟಿರುವ ಸುದೀಪ್, ಇದು ನನ್ನ ಕೊನೆ ಸೀಸನ್ ಎಂದುಬಿಟ್ಟಿದ್ದಾರೆ. ಅದಾಗ್ಯೂ ಸುದೀಪ್ ನಿರ್ಧಾರ ಬದಲಿಸಿಕೊಳ್ಳಲಿದ್ದಾರಾ? ಅಭಿಮಾನಿಗಳಿಗಾಗಿ ಬಿಗ್ ಬಾಸ್ ನಿರೂಪಣೆಯನ್ನು ಮುಂದುವರಿಸಲಿದ್ದಾರಾ ಎಂದು ಕಾದು ಕುಳಿತಿರುವವರ ಸಂಖ್ಯೆ ದೊಡ್ಡದಿದೆ.