'ಭೀಮ', ಕನ್ನಡ ಚಿತ್ರರಂಗದಲ್ಲಿ ಗ್ಲಿಂಪ್ಸ್, ಪೋಸ್ಟರ್, ಹಾಡುಗಳಿಂದಲೇ ಸಿನಿಪ್ರಿಯರಲ್ಲಿ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ. 'ಸಲಗ' ಸಕ್ಸಸ್ ಬಳಿಕ ದುನಿಯಾ ವಿಜಯ್ ಅಭಿನಯಿಸಿ, ಆ್ಯಕ್ಷನ್ ಕಟ್ ಹೇಳಿರುವ 'ಭೀಮ' ಸಿನಿಮಾ ಬಿಡುಗಡೆಗೆ ಇನ್ನೊಂದು ವಾರ ಬಾಕಿ. ತಮ್ಮ ಸಿನಿಮಾದ ಗೆಲುವಿಗಾಗಿ ನಾಯಕ ನಟ ದುನಿಯಾ ವಿಜಯ್ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಚಿತ್ರದ ಪ್ರಮೋಷನ್ನಲ್ಲಿ ಬ್ಯುಸಿ ಆಗಿದ್ದಾರೆ. ಈ ಮಧ್ಯೆ ಚಿತ್ರಮಂದಿರಗಳ ಎದುರು ರಾರಾಜಿಸಲು ಕಟೌಟ್ಗಳು ರೆಡಿಯಾಗುತ್ತಿವೆ. ಇದೀಗ ಈ ಬಹುನಿರೀಕ್ಷಿತ ಚಿತ್ರತಂಡದಿಂದ ಹೊಸ ಅಪ್ಡೇಟ್ ಒಂದು ಹೊರಬಿದ್ದಿದೆ.
ಅದೇನಪ್ಪಾ ಅಂದ್ರೆ ರಾಜ್ಯದ ಸಿಎಂಗೆ ಚಿತ್ರತಂಡದ ಕಡೆಯಿಂದ ಆಹ್ವಾನ ಸಿಕ್ಕಿದೆ. ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ಭೀಮ ಸಿನಿಮಾ ನೋಡುವಂತೆ ಆಹ್ವಾನ ನೀಡಿದ್ದಾರೆ. ಇಂದು ಖುದ್ದಾಗಿ ವಿಜಯ್ ಅವರು ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಸಿನಿಮಾ ನೋಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಸಿಎಂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಚಿತ್ರ ವೀಕ್ಷಿಸುವ ಆಸೆ ವ್ಯಕ್ತಪಡಿಸಿದ್ದಾರೆ. ಆದ್ರೆ ಸಿನಿಮಾ ಬಿಡುಗಡೆಗೂ ಮುನ್ನ ಸಿಎಂ ಸಿನಿಮಾ ವೀಕ್ಷಿಸುತ್ತಾರೋ ಅಥವಾ ಬಿಡುಗಡೆ ಆದ್ಮಲೇ ನೋಡುತ್ತಾರೋ ಗೊತ್ತಿಲ್ಲ. ಸಿಎಂ ತಮ್ಮ ರಾಜಕೀಯ ಕೆಲಸಗಳನ್ನು ಬಿಡುವು ಮಾಡಿಕೊಂಡು ಸಿನಿಮಾ ನೋಡಲಿದ್ದಾರಂತೆ.
ಸ್ಯಾಂಡಲ್ವುಡ್ನಲ್ಲಿ ಸಖತ್ ಸದ್ದು ಮಾಡುತ್ತಿರುವ 'ಭೀಮ'ನಿಗೆ ಸೆನ್ಸಾರ್ ಮಂಡಳಿಯಿಂದ 'ಎ' ಸರ್ಟಿಫಿಕೆಟ್ ಸಿಕ್ಕಿದೆ. ಸದ್ಯ ಸಮಾಜದಲ್ಲಿ ನಡೆಯುತ್ತಿರುವ ಡ್ರಗ್ಸ್ ವಿಚಾರ, ಇಂದಿನ ಯುವಕರು ಏಕೆ ರೌಡಿಸಂಗೆ ಎಂಟ್ರಿ ಕೊಡುತ್ತಾರೆ ಅನ್ನೋದನ್ನ ತೋರಿಸುವ ಜೊತೆಗೆ ಒಂದು ಸಾಮಾಜಿಕ ಸಂದೇಶದ ಕಥೆಯನ್ನು ಈ ಚಿತ್ರ ಒಳಗೊಂಡಿದೆ.
ನೈಜ ಘಟನೆ ಆಧಾರಿತ ಕಥೆಯಾಗಿರುವ 'ಭೀಮ' ಸಹಜವಾಗಿ ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸಿದೆ. ವಿಜಯ್ ಜೊತೆಗೆ ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಿ ಕಾಕ್ರೋಚ್, ಕಲ್ಯಾಣಿ, ಅಶ್ವಿನಿ ಮತ್ತು ಪ್ರಿಯಾ, ಡ್ರಾಗನ್ ಮಂಜು ಸೇರಿದಂತೆ ದೊಡ್ಡ ತಾರಾಬಳಗ ಇಲ್ಲಿದೆ.