ಕರ್ನಾಟಕ

karnataka

ETV Bharat / entertainment

ಫೇಕ್​​ ಡೆತ್ ನ್ಯೂಸ್‌ಗೆ ವ್ಯಾಪಕ ಖಂಡನೆ: ಪೂನಂ ಪಾಂಡೆ ಬಂಧನಕ್ಕೆ ಒತ್ತಾಯ - Cine Workers Association

ಸುಳ್ಳು ಸುದ್ದಿ ಹರಡಿದ ನಟಿ ಪೂನಂ ಪಾಂಡೆ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸುವಂತೆ ಆಲ್ ಇಂಡಿಯನ್​​ ಸಿನಿ ವರ್ಕರ್ಸ್ ಅಸೋಸಿಯೇಷನ್ ಒತ್ತಾಯಿಸಿದೆ.

Cine Workers Association Slams Poonam Pandey
ಪೂನಂ ಪಾಂಡೆ ಬಂಧನಕ್ಕೆ ಎಐಸಿಡಬ್ಲ್ಯೂಎ ಒತ್ತಾಯ

By ETV Bharat Karnataka Team

Published : Feb 4, 2024, 2:19 PM IST

ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ ಮತ್ತು ಅವರ ತಂಡವು 'ಗರ್ಭಕಂಠದ ಕ್ಯಾನ್ಸರ್' ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 'ಫೇಕ್​​ ಡೆತ್ ನ್ಯೂಸ್' ಹರಡಿ ಇದೀಗ ವ್ಯಾಪಕ ಟೀಕೆಗೊಳಗಾಗಿದೆ. ಸುಳ್ಳು ಸುದ್ದಿ ಹಬ್ಬಿಸಿದ ತಾರೆಯ ವಿರುದ್ಧ ಮುಂಬೈ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಲವರು ಒತ್ತಾಯಿಸಿದ್ದಾರೆ. ಆಲ್ ಇಂಡಿಯನ್​​ ಸಿನಿ ವರ್ಕರ್ಸ್ ಅಸೋಸಿಯೇಷನ್ (ಎಐಸಿಡಬ್ಲ್ಯೂಎ) ಕೂಡ ನಟಿಯ ವಿರುದ್ಧ ಎಫ್‌ಐಆರ್‌ಗೆ ಆಗ್ರಹಿಸಿದೆ.

ಮಾಧ್ಯಮದವರೊಂದಿಗೆ ಮಾತನಾಡಿದ ಎಐಸಿಡಬ್ಲ್ಯುಎ ಅಧ್ಯಕ್ಷ ಸುರೇಶ್ ಶ್ಯಾಮ್​​ಲಾಲ್ ಗುಪ್ತಾ, "ಪೂನಂ ಪಾಂಡೆ ಭಾರತೀಯರ ಭಾವನೆಗಳೊಂದಿಗೆ ಆಟವಾಡಿದ್ದಾರೆ. ನಟಿಯ ನಿಧನದ ಸುದ್ದಿ ತಿಳಿದ ಅನೇಕರು ಆಕೆಗಾಗಿ ಮತ್ತು ಅವರ ಕುಟುಂಬಕ್ಕಾಗಿ ಪ್ರಾರ್ಥಿಸಿದರು. ಚೀಪ್​ ಪಬ್ಲಿಸಿಟಿ ಸ್ಟಂಟ್​ ಮೂಲಕ ಜನರ ಭಾವನೆಗಳನ್ನು ನೋಯಿಸಿದ್ದಾರೆ. ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಇದು ಸೂಕ್ತ ವಿಧಾನವಲ್ಲ. ಪೂನಂ ಪಾಂಡೆ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರಲ್ಲಿ ವಿನಂತಿಸುತ್ತೇನೆ'' ಎಂದು ತಿಳಿಸಿದ್ದಾರೆ.

ಇದಕ್ಕೂ ಮೊದಲು ನಟಿ ಬಿಪಾಶಾ ಬಸು ಕೂಡ ಪೂನಂ ಪಾಂಡೆ ನಡೆಗೆ ವ್ಯಾಪಕ ಖಂಡನೆ ವ್ಯಕ್ತಪಡಿಸಿದ್ದರು. 'ನಟಿ ಮಾತ್ರವಲ್ಲ, ಈ ಕೃತ್ಯದ ಹಿಂದೆ ಇರುವ ಪಿಆರ್​ ತಂಡ ಕೂಡ ನಾಚಿಕೆಪಡಬೇಕು' ಎಂದು ನಟಿ ಆರತಿ ಸಿಂಗ್ ಅವರ ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ ಬಿಪಾಶಾ ಬರೆದಿದ್ದರು. ನಟಿ ಮಿನಿ ಮಾಥುರ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ, "ಈ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್ ಸ್ಟಂಟ್ ಕೇವಲ ಅಸಹ್ಯಕರ ವಿಷಯ ಮಾತ್ರವಲ್ಲ, ಸಂವೇದನಾಶೀಲರಹಿತ ಕೂಡ. ವಿಷಯದ ಬಗ್ಗೆ ಸಂಶೋಧನೆ ಮಾಡದೇ ಹೀಗೆ ಮಾಡಿದ್ದಾರೆ'' ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರ ಎಂಎಲ್​ಸಿ ಸತ್ಯಜೀತ್ ತಂಬೆ ಕೂಡ ಪೂನಂ ಪಾಂಡೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮುಂಬೈ ಪೊಲೀಸರನ್ನು ಒತ್ತಾಯಿಸಿದ್ದಾರೆ. ತಮ್ಮ ಹೇಳಿಕೆಯಲ್ಲಿ, "ಪೂನಂ ಪಾಂಡೆ ಸಾವಿನ ಸುದ್ದಿ ಅಂತಿಮವಾಗಿ ಪ್ರಚಾರದ ಸ್ಟಂಟ್ ಎಂಬುದು ಸಾಬೀತಾಯಿತು. ಈ ಘಟನೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅವುಗಳಲ್ಲಿ ಮೊದಲನೆಯದು, ಜಾಗೃತಿ ಎಂದು ನಕಲಿ ಸುದ್ದಿ ಹರಡಿದ್ದು. ಪ್ರಭಾವಿ ವ್ಯಕ್ತಿ ಅಥವಾ ಮಾಡೆಲ್ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾಯುವುದು ರೋಗದ ಬಗ್ಗೆ ಜಾಗೃತಿ ಮೂಡಿಸುವ ವಿಧಾನವಾಗುವುದಿಲ್ಲ. ಇಡೀ ಘಟನೆಯು ಗರ್ಭಕಂಠದ ಕ್ಯಾನ್ಸರ್‌ನ ಗಂಭೀರತೆಯನ್ನು ಶೂನ್ಯಗೊಳಿಸುತ್ತದೆ ಮತ್ತು ಗಮನವನ್ನು ಸಂಪೂರ್ಣವಾಗಿ ಆ ಪ್ರಭಾವಿ ವ್ಯಕ್ತಿಗಳ ಕಡೆಗೆ ತಿರುಗಿಸುತ್ತದೆ. ನಟಿ ಜಾಗೃತಿ ಮೂಡಿಸುವ ಬದಲು ಕ್ಯಾನ್ಸರ್​ನಿಂದ ಬದುಕುಳಿದವರ ಮೇಲೆ ತಮಾಷೆ ಮಾಡಿದಂತಿದೆ. ಮತ್ತೊಂದು ಸಮಸ್ಯೆ ಎಂದರೆ, ಈ ನಾಟಕವನ್ನು ಸುದ್ದಿ ಸಂಸ್ಥೆಗಳು ಸತ್ಯಾನುಸತ್ಯತೆಗಳನ್ನು ಪರಿಶೀಲಿಸದೇ ವರದಿ ಮಾಡಿವೆ. ಮಾಧ್ಯಮಗಳನ್ನು ಹೀಗೆಲ್ಲಾ ಬಳಸಿಕೊಲ್ಳುತ್ತಿದ್ದಾರೆ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:'ಫೇಕ್​ ಡೆತ್​ ನ್ಯೂಸ್'; ​ಪೂನಂ ಪಾಂಡೆಗೆ ಸೆಲೆಬ್ರಿಟಿಗಳಿಂದ ಛೀಮಾರಿ, ನಟಿ ಪರ ನಿಂತ ಆರ್​ಜಿವಿ!

ಫೆಬ್ರವರಿ 2ರಂದು ನಟಿ ಪೂನಂ ಪಾಂಡೆ ಹೆಸರಿನ ಅಧಿಕೃತ ಸೋಷಿಯಲ್​ ಮೀಡಿಯಾ ಖಾತೆಯಿಂದ ಪೋಸ್ಟ್ ಒಂದು ಶೇರ್ ಆಯ್ತು. ಗರ್ಭಕಂಠದ ಕ್ಯಾನ್ಸರ್‌ನಿಂದ ಪೂನಂ ಪಾಂಡೆ ಕೊನೆಯುಸಿರೆಳೆದಿದ್ದಾರೆ ಎಂದು ಆ ಪೋಸ್ಟ್​​ನಲ್ಲಿ ತಿಳಿಸಲಾಗಿತ್ತು. ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಿಂದ ಸುದ್ದಿ ಬಂದ ಹಿನ್ನೆಲೆ, ಮಾಧ್ಯಮಗಳೂ ಕೂಡ ಈ ಸುದ್ದಿಯನ್ನು ಕೈಗೆತ್ತಿಕೊಂಡಿತು. ಆದ್ರೆ ನಿನ್ನೆ (ಫೆಬ್ರವರಿ 3) ಪೂನಂ ಪಾಂಡೆ ವಿಡಿಯೋ ಶೇರ್ ಮಾಡಿ ನಾನು ಜೀವಂತವಾಗಿದ್ದೇನೆ. ಗರ್ಭಕಂಠದ ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸಲು ಈ ಕ್ರಮ ಕೈಗೊಂಡೆವು ಎಂದು ತಿಳಿಸಿದರು. ಜಾಗೃತಿ ಮೂಡಿಸಲು ನಟಿ ತೆಗೆದುಕೊಂಡ ವಿಧಾನಕ್ಕೆ ಅಭಿಮಾನಿಗಳೂ ಸೇರಿದಂತೆ ಅನೇಕ ಸೆಲೆಬ್ರಿಟಿಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಇದನ್ನೂ ಓದಿ:'I am alive': ನಾನು ಜೀವಂತವಾಗಿದ್ದೇನೆಂದು ಹೇಳಿಕೊಂಡ ನಟಿ ಪೂನಂ ಪಾಂಡೆ

ABOUT THE AUTHOR

...view details