ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಿವಾಸದ ಎದುರು ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ, ಮೃತ ಆರೋಪಿ ಅನುಜ್ ಥಾಪನ್ ಸಂಬಂಧಿಕರು ಸಿಐಡಿ ಎದುರು ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದೆ.
ಮುಂಬೈ ಜೈಲಿನಲ್ಲಿ ಆತ್ಮಹತ್ಯೆ ಪ್ರಕರಣ ನಡೆದ ನಂತರ ಥಾಪನ್ ಕುಟುಂಬ ತಮ್ಮ ಹೇಳಿಕೆ ದಾಖಲಿಸಿದೆ. ಪೊಲೀಸ್ ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾದ ಅನುಜ್ ಥಾಪನ್ ಅವರ ಕುಟುಂಬದ ಮೂವರು ಸದಸ್ಯರ ಹೇಳಿಕೆಯನ್ನು ಮಹಾರಾಷ್ಟ್ರ ರಾಜ್ಯ ಸಿಐಡಿ ಶನಿವಾರ ದಾಖಲಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಐಡಿ ಅಧಿಕಾರಿಗಳು ಮೃತ ಆರೋಪಿಯ ಸಂಬಂಧಿಕರಾದ ವಿಕ್ರಮ್ ಕುಮಾರ್, ಕುಲ್ದೀಪ್ ಕುಮಾರ್ ಮತ್ತು ಜಸ್ವಂತ್ ಸಿಂಗ್ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಬಂಧಿತ ಶೂಟರ್‌ಗಳಿಗೆ ರೈಫಲ್‌ಗಳು ಮತ್ತು ಬುಲೆಟ್‌ಗಳನ್ನು ಸರಬರಾಜು ಮಾಡುತ್ತಿದ್ದ ಆರೋಪದಡಿ ಪಂಜಾಬ್‌ನಲ್ಲಿ ಸಿಕ್ಕಿಬಿದ್ದ ಅನುಜ್ ಥಾಪನ್ (32) ಮೃತದೇಹ ಬುಧವಾರ ಮುಂಬೈ ಅಪರಾಧ ವಿಭಾಗದ ಲಾಕ್‌ಅಪ್‌ನ ಶೌಚಾಲಯದಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೇ 2ರಂದು ಜೆಜೆ ಆಸ್ಪತ್ರೆಯಲ್ಲಿ ಅನುಜ್ ಥಾಪನ್ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು. ಸಲ್ಮಾನ್ ಖಾನ್ ಮನೆಯ ಹೊರಗೆ ನಡೆದ ಶೂಟ್ಔಟ್ನಲ್ಲಿ ಭಾಗಿಯಾಗಿದ್ದ ಆರೋಪಿಗಳಿಗೆ ಶಸ್ತ್ರಾಸ್ತ್ರ ಪೂರೈಸಿದವರ ಪೈಕಿ ಈತ ಕೂಡ ಓರ್ವ ಎಂಬ ಆರೋಪವಿದ್ದು, ತನಿಖೆ ಮುಂದುವರಿದಿದೆ. ಆದ್ರೆ ಅನುಜ್ನನ್ನು ಪೊಲೀಸರು 'ಕೊಂದಿದ್ದಾರೆ' ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದಾರೆ. ಮೃತ ಆರೋಪಿಯ ಸಹೋದರ ಅಭಿಷೇಕ್ ಥಾಪನ್ ಮಾತನಾಡಿ, ಅನುಜ್ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ, ನಮಗೆ ನ್ಯಾಯ ಬೇಕು ಎಂದು ತಿಳಿಸಿದ್ದಾರೆ.