ಬಹುಭಾಷೆಯ ಸಿನಿಮಾಗಳು ಕನ್ನಡದಲ್ಲಿ ಡಬ್ಬಿಂಗ್ ಆಗಿ ಬಿಡುಗಡೆ ಆಗೋದು ಹೆಚ್ಚಾಗುತ್ತಿದೆ. ಈಗ ಕಾಲಿವುಡ್ನ ಚಿಯಾನ್ ವಿಕ್ರಮ್ ಅಭಿನಯದ ಚಿತ್ರ ತಂಗಲಾನ್ ಬಿಡುಗಡೆಗೆ ಸಜ್ಜಾಗಿದೆ. ಟ್ರೇಲರ್ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ನಿರೀಕ್ಷೆ ಹುಟ್ಟು ಹಾಕಿರುವ ತಂಗಲಾನ್ ಚಿತ್ರ ಕನ್ನಡ ಸೇರಿದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇದೇ ಆಗಸ್ಟ್ 15ರಂದು ಬಿಡುಗಡೆ ಆಗುತ್ತಿದೆ.
ಈ ಚಿತ್ರದ ಪ್ರಚಾರಕ್ಕಾಗಿ ನಟ ವಿಕ್ರಮ್, ನಟಿ ಮಾಳವಿಕಾ ಮೋಹನ್ ನಿರ್ದೇಶಕ ಪಾ ರಂಜಿತ್ ಸೇರಿದಂತೆ ತಂಗಲಾನ್ ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು. ಖಾಸಗಿ ಹೋಟೆಲ್ನಲ್ಲಿ ನಡೆದ ತಂಗಲಾನ್ ಚಿತ್ರ ಪತ್ರಿಕಾಗೋಷ್ಠಿ ಹಮ್ಮಿಕೊಂಡಿತ್ತು.
ಮೊದಲು ಮಾತನಾಡಿದ ಚಿಯಾನ್ ವಿಕ್ರಮ್, ತಂಗಲಾನ್ ಚಿತ್ರದ ಪಾತ್ರಕ್ಕಾಗಿ ರೆಡಿಯಾಗಲು ಆರು ತಿಂಗಳು ಹಿಡಿಯಿತು. ಸ್ವಲ್ಪ ದಪ್ಪ ಇದ್ದೆ. ಪಾತ್ರಕ್ಕಾಗಿ ತೂಕ ಇಳಿಸಬೇಕಾಯಿತು. ಹಾಗೇ ನನ್ನ ಗೆಟಪ್ಗಾಗಿ ತುಂಬಾನೇ ವರ್ಕ್ ಔಟ್ ಮಾಡಬೇಕಾಯಿತು. ಹೇರ್ ಸ್ಟೈಲ್, ಮೇಕ್ ಅಪ್ಗೆ ಪ್ರತಿದಿನ 4ರಿಂದ 6 ಗಂಟೆ ಬೇಕಾಗುತ್ತಿತ್ತು. ಈ ಪಾತ್ರವನ್ನು ನಾನು ಬಹಳ ಇಷ್ಟಪಟ್ಟು ಮಾಡಿದ್ದೇನೆ. ಪಾತ್ರ ನಿಜಕ್ಕೂ ಪ್ರೇಕ್ಷಕರಿಗೆ ಇಷ್ಟ ಆಗಲಿದೆ ಎಂದು ತಿಳಿಸಿದರು.
ಇನ್ನೂ ಕನ್ನಡ ಚಿತ್ರರಂಗದಲ್ಲಿ ಬರುತ್ತಿರುವ ಕ್ವಾಲಿಟಿ ಚಿತ್ರಗಳ ಬಗ್ಗೆ ಮಾತನಾಡಿದ ವಿಕ್ರಮ್, ಬಹಳ ಖುಷಿ ಆಗಿದೆ. ಕೆಜಿಎಫ್ ಹಾಗೂ ಕಾಂತಾರ ನಂತರ ಇತ್ತೀಚೆಗೆ ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನೋಡಿದೆ. ರಕ್ಷಿತ್ ಶೆಟ್ಟಿ ಪಾತ್ರ ಹಾಗೂ ಚಿತ್ರದ ಕಂಟೆಂಟ್ ಬಹಳ ಇಷ್ಟ ಆಯ್ತು. ಕನ್ನಡದಲ್ಲಿ ಕಂಟೆಂಟ್ ಸಿನಿಮಾಗಳು ಬಂದಾಗ ನಾನು ನೋಡುತ್ತಿರುತ್ತೇನೆ. ಒಳ್ಳೆ ಕಥೆ ಸಿಕ್ಕರೆ ಕನ್ನಡ ಸಿನಿಮಾದಲ್ಲಿ ನಟಿಸುತ್ತೇನೆ ಎಂದರು.