'ಪಡ್ಡೆ ಹುಲಿ'ಯ ಮೂಲಕ ಕನ್ನಡ ಚಿತ್ರರಂಗದಲ್ಲಿ ನಟ ಶ್ರೇಯಸ್ ಮಂಜು ಯೂತ್ ಸ್ಟಾರ್ ಆಗಿ ಭರವಸೆ ಮೂಡಿಸಿದ್ದಾರೆ. ಇವರು 'ರಾಣಾ' ಬಳಿಕ ಇದೀಗ 'ವಿಷ್ಣುಪ್ರಿಯ'ರಾಗಿದ್ದಾರೆ. ಹೌದು, 90ರ ದಶಕದ ಸಮ್ಮೋಹಕ ಪ್ರೇಮಕಥೆ ಒಳಗೊಂಡಿರುವ ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಜ್ಜಾಗಿದೆ. ಪಡ್ಡೆಹುಲಿಯಾಗಿ ಪ್ರೇಕ್ಷಕರ ಗಮನ ಸೆಳೆದಿದ್ದ ಶ್ರೇಯಸ್ ಮಂಜು ವಿಷ್ಣುಪ್ರಿಯನಾಗಿ ವಿಶಿಷ್ಟ ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಅಣಿಯಾಗುತ್ತಿದ್ದಾರೆ.
ಈ ಚಿತ್ರದ ಚೆಂದದ ಹಾಡೊಂದು ವಾರಗಳ ಹಿಂದೆ ಬಿಡುಗಡೆಯಾಗಿತ್ತು. ದಿನ ದಿನಕ್ಕೆ ಈ ಹಾಡು ಟ್ರೆಂಡ್ ಆಗುತ್ತಿದೆ. ಕೇಳಿದ ತಕ್ಷಣವೇ ಪ್ರೇಮದೂರಿಗೆ ಕೈ ಹಿಡಿದು ಕರೆದೊಯ್ಯುವ ಪ್ರೇಮಗೀತೆ ಹೆಚ್ಚೆಚ್ಚು ವೀಕ್ಷಣೆ ಪಡೆಯುತ್ತಿದೆ. ''ಚಿಗುರು ಚಿಗುರು ಸಮಯ ಹಿತವಾದ ಒಂದು ಮೌನ, ಒಲವು ಚಿಗುರೋ ಸಮಯ ಎದೆ ಬೇರಿನಲ್ಲಿ ಮೌನ..'' ಎಂಬ ಹಾಡು ಸಂಗೀತ, ಸಾಹಿತ್ಯ ಹಾಗೂ ದೃಶ್ಯವೂ ಸೇರಿದಂತೆ ಎಲ್ಲಾ ರೀತಿಯಲ್ಲೂ ಮೋಹಕವಾಗಿದೆ.
ಡಾ.ವಿ.ನಾಗೇಂದ್ರ ಪ್ರಸಾದ್ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಇದರೊಂದಿಗೆ ವರ್ಷಾರಂಭದಲ್ಲಿಯೇ ನವಿರು ಭಾವವೊಂದನ್ನು ನಾಗೇಂದ್ರ ಪ್ರಸಾದ್ ಕೇಳುಗರ ಬೊಗಸೆ ತುಂಬಿಸಿದ್ದಾರೆ. ನಜೀನ್ ಅರ್ಷಾದ್ ಕಂಠಸಿರಿಯಲ್ಲಿ ಅತ್ಯಂತ ಸೊಗಸಾಗಿ ಹಾಡು ಮೂಡಿಬಂದಿದೆ. ಕೇರಳದ ಪ್ರಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಕನ್ನಡದಲ್ಲೂ ಕಮಾಲ್ ಮಾಡಿದ್ದಾರೆ. ಮತ್ತೆ ಮತ್ತೆ ಕೇಳಬೇಕೆನಿಸುವ ಗೀತೆಯ ಪ್ರಭೆಯಲ್ಲಿ ವಿಷ್ಣುಪ್ರಿಯನ ಕ್ರೇಜ್ ಮತ್ತಷ್ಟು ಹೆಚ್ಚಾಗುತ್ತಿದೆ. ಈ ವರ್ಷದ ಮೆಲೋಡಿಯಸ್ ಹಾಡೆಂದು ಗುರುತಿಸಿಕೊಳ್ಳುವ ಎಲ್ಲಾ ಗುಣಗಳನ್ನೂ ಈ ಚಿಗುರು ಚಿಗುರಿಸಿದೆ.