ಹೈದರಾಬಾದ್: ನಟ ಕಾರ್ತಿಕ್ ಆರ್ಯನ್ ದೈಹಿಕ ರೂಪಾಂತರಕ್ಕೆ ಒಳಗಾದ ಚಿತ್ರ 'ಚಂದು ಚಾಂಪಿಯನ್'. ಚಿತ್ರ ವಿಮರ್ಶಕರಿಂದ ಸಿನಿಮಾ ಉತ್ತಮ ಹೆಸರು ಪಡೆದರೂ ಪ್ರೇಕ್ಷಕರನ್ನು ರಂಜಿಸುವಲ್ಲಿ ಸಿನಿಮಾ ಹಿಂದೆ ಬಿದ್ದಿದೆ. ಇದರಿಂದ ಚಿತ್ರದ ಆರಂಭಕ್ಕೆ ಪ್ರತಿಕ್ರಿಯೆ ಕೂಡ ನೀರಸವಾಗಿದೆ.
ಭಾರತದ ಮೊದಲ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ಮುರಳಿಕಾಂತ್ ಪೇಟ್ಕರ್ ಅವರ ಜೀವನವನ್ನು ಆಧರಿಸಿದ ಕ್ರೀಡಾ ಬಯೋಪಿಕ್ ಚಿತ್ರಕ್ಕೆ ಕಬೀರ್ ಖಾನ್ ನಿರ್ದೇಶನವಿದೆ. 'ಭಜರಂಗಿ ಭಾಯಿಜಾನ್' ಮತ್ತು 'ಏಕ್ ಥಾ ಟೈಗರ್' ಇವರ ಸೂಪರ್ ಹಿಟ್ ಸಿನಿಮಾ ಆಗಿದ್ದು, 'ಟ್ಯೂಬ್‌ಲೈಟ್' ಮತ್ತು ಭಾರತ ಮೊದಲ ಕ್ರಿಕೆಟ್ ವಿಶ್ವಕಪ್ ಗೆದ್ದ ಕಥೆಯಾಧರಿತ ಚಿತ್ರ 83 ಉತ್ತಮ ಪ್ರದರ್ಶನ ಕಂಡಿತ್ತು. ಸ್ಪೂರ್ತಿಧಾಯಕ ಕಥೆಗಳ ಮೂಲಕ ಜನರನ್ನು ಮನರಂಜಿಸುತ್ತಿರುವ ಈ ನಿರ್ದೇಶಕರ ಚಿತ್ರ ಚಂದು ಚಾಂಪಿಯನ್ ಇದೀಗ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿಲ್ಲ.
ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, 'ಚಂದು ಚಾಂಪಿಯನ್' ಚಿತ್ರ ತೆರೆಕಂಡ ದಿನ ಸಿನಿಮಾ ಕೇವಲ 4.75 ಕೋಟಿ ಸಂಪಾದಿಸಿದೆ. ನಟ ಕಾರ್ತಿಕ್ ಆರ್ಯನ್ ಅವರ ವೃತ್ತಿ ಜೀವನದಲ್ಲಿ 2015ರಲ್ಲಿ 'ಪ್ಯಾರ್ ಕಾ ಪಂಚ್ನಾಮ್ 2', ಬಳಿಕ ಅತಿ ಕಡಿಮೆ ಓಪನಿಂಗ್ ಕಂಡ ಚಿತ್ರ ಇದಾಗಿದೆ. ಕಳೆದ ವರ್ಷ ನಟ ಕಾರ್ತಿಕ್ ಆರ್ಯನ್ ನಟನೆಯ 'ಸತ್ಯ ಪ್ರೇಮ್ ಕೀ ಕಥಾ' 8.25 ಕೋಟಿಯನ್ನು ಮೊದಲ ದಿನವೇ ಗಳಿಕೆ ಮಾಡಿತ್ತು. ಇನ್ನು ಕೋವಿಡ್ಗೆ ಮುನ್ನ ಬಿಡುಗಡೆಯಾಗಿದ್ದ, ಭೂಲ್ ಭುಲಯ್ಯ 2 ಚಿತ್ರ 14.11 ಕೋಟಿಯನ್ನು ಮೊದಲ ದಿನ ಗಳಿಸುವ ಮೂಲಕ ಒಟ್ಟಾರೆ 265.5 ಕೋಟಿ ಬಾಚಿ ಕೊಂಡಿತ್ತು.