ಬಿಗ್ ಬಾಸ್ ಸೀಸನ್ 11 ಈಗಾಗಲೇ 70 ದಿನಗಳನ್ನು ಪೂರೈಸಿದೆ. ಫಿನಾಲೆಗೆ ಇನ್ನೇನು ಕೆಲವೇ ವಾರಗಳು ಬಾಕಿ. ಆಟ ಮತ್ತಷ್ಟು ರೋಮಾಂಚನಗೊಂಡಿದೆ. ಮನೆಗೆ ಕ್ಯಾಪ್ಷನ್ ಆಗುವ ಬಯಕೆ ಪ್ರತೀ ಸ್ಪರ್ಧಿಗಳದ್ದು. ಕ್ಯಾಪ್ಟನ್ಸಿ ಗೆದ್ದರೆ ಒಂದು ವಾರ ಮನೆಯ ನಾಮಿನೇಷನ್ನಿಂದ ಬಚಾವ್ ಆಗುವ ಸುವರ್ಣಾವಕಾಶ ಆ ಸ್ಪರ್ಧಿಗಳಿರುತ್ತದೆ. ಫಿನಾಲೆ ಸಮೀಪಿಸುತ್ತಿರುವ ಈ ಹೊತ್ತಲ್ಲಿ ಮನೆಯಲ್ಲಿ ಉಳಿದುಕೊಳ್ಳೋದು ಬಹಳ ಮುಖ್ಯ. ಹಾಗಾಗಿ ಕ್ಯಾಪ್ಟನ್ಸಿ ಟಾಸ್ಕ್ ಗೆಲ್ಲೋದೂ ಕೂಡಾ ಅತ್ಯವಶ್ಯಕ. ಈ ಹಿಂದೆ ಒಂದಿಷ್ಟು ಟಾಸ್ಕ್ ಗೆದ್ದು ಕೊನೆಯಲ್ಲಿ ಉಳಿದುಕೊಳ್ಳುವವರು ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಭಾಗಿಯಾಗುತ್ತಿದ್ದರು. ಆದರೆ, ಈ ಬಾರಿ ಇದು ಕ್ಯಾಪ್ಟನ್ಸಿ ಟಾಸ್ಕ್ ಎಂದು ಮೊದಲೇ ಬಿಗ್ ಬಾಸ್ ಘೋಷಿಸಿಬಿಟ್ಟಿದ್ದಾರೆ. ಹಾಗಾಗಿ ವಿಜಯಕ್ಕೆ ಪ್ರತೀ ಸ್ಪರ್ಧಿಗಳು ಸಂಪೂರ್ಣ ಶ್ರಮ ಹಾಕುತ್ತಿದ್ದಾರೆ.
''ನಾಯಕತ್ವಕ್ಕಾಗಿ ನಾನಾ ಕಸರತ್ತು!'' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನೊಂದಿಗೆ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಂಡಿದೆ. ಇದರಲ್ಲಿ ಚೈತ್ರಾ ಕುಂದಾಪುರ ಅವರು ಕಣ್ಣೀರಿಟ್ಟಿರೋದನ್ನು ಕಾಣಬಹುದು. ಸಂಪೂರ್ಣ ಮಾಹಿತಿ ತಿಳಿಯಲು ರಾತ್ರಿ ಪ್ರಸಾರ ಕಾಣಲಿರುವ ಸಂಚಿಕೆ ವೀಕ್ಷಿಸಬೇಕಾಗಿದೆ.
ನನಗೆ ಈ ಮನೆಯಲ್ಲಿ ಆಟ ಆಡಲು ಅವಕಾಶ ಕೊಡೋದಿಲ್ಲ. ನಂತರ ನಾಮಿನೇಷನ್ನಲ್ಲಿ ಇದೇ ಕಾರಣ ಕೊಡುತ್ತಾರೆ. ಈ ಬಾರಿ ನಾಮಿನೇಟ್ ಆಗಿ ಎಲಿಮಿನೇಷನ್ ಅಂದ್ರೆ ಏನು ಅನ್ನೋದನ್ನು ಅನುಭವಿಸಿ ಬಂದಿದ್ದೇನೆ. ಆಡಲು ನನಗೆ ಅವಕಾಶ ಬೇಕು. ಆದರೆ ಅವಕಾಶ ಸಿಗುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ಕ್ಯಾಪ್ಟನ್ ಗೌತಮಿ ಜಾಧವ್ ನಿರ್ಧಾರ! ಸ್ಪರ್ಧಿಗಳನ್ನು ಆರಿಸೋ ಸಂದರ್ಭದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಮಾತಿಗೆ ಗೌತಮಿ ಮತ್ತು ಹನುಮಂತ ಅವರು ಚೈತ್ರಾ ಅವರ ಹೆಸರನ್ನು ತೆಗೆದುಕೊಂಡಿದ್ದರು. ಬಹುತೇಕ ಸಂದರ್ಭಗಳಲ್ಲಿ ಚೈತ್ರಾ ಅವರನ್ನು ಉಸ್ತುವಾರಿಗೇನೆ ಹಾಕಲಾಗಿತ್ತು. ಹಾಗಾಗಿ ನಾಮಿನೇಷನ್ ಸಂದರ್ಭಗಳಲ್ಲಿ ಚೈತ್ರಾ ಅವರ ಆಟ ನೋಡಿಲ್ಲ ಎಂಬ ಮಾತುಗಳು ವ್ಯಕ್ತವಾಗಿದ್ದವು. ಈಗಲೂ ಗೌತಮಿ ಅವರು ಚೈತ್ರಾರಿಗೆ ಉಸ್ತುವಾರಿ ಜವಾಬ್ದಾರಿ ಕೊಡಲು ಮುಂದಾಗಿದ್ದಾರೆ. ಇದು ಚೈತ್ರಾರನ್ನು ಕೆರಳಿಸಿದೆ. ಹಾಗಾಗಿ ಕಣ್ಣೀರಿಟ್ಟು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.