ಬಿಗ್ ಬಾಸ್, ಕನ್ನಡದ ಅತ್ಯಂತ ಜನಪ್ರಿಯ ಕಿರುತೆರೆ ಕಾರ್ಯಕ್ರಮ. ಸೀಸನ್ 11ರ ಆಟ ಈಗಾಗಲೇ ಶುರುವಾಗಿದೆ. ಇಂದು ರಾತ್ರಿ ಮೊದಲ ದಿನದ ಸಂಚಿಕೆ ಪ್ರಸಾರ ಕಾಣಲಿದ್ದು, ಅಪಾರ ಸಂಖ್ಯೆಯ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಕಳೆದ ದಿನ ಎಲ್ಲ ಸ್ಪರ್ಧಿಗಳನ್ನು ನಿರೂಪಕ ಕಿಚ್ಚ ಸುದೀಪ್, ಬಿಗ್ ಬಾಸ್ ಟೀಮ್ ಹಾಗೂ ಕನ್ನಡಿಗರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಅಸಲಿ ಆಟ ಇಂದಿನಿಂದ ಶುರುವಾಗಲಿದ್ದು, ಮೊದಲ ದಿನವೇ ಚೈತ್ರಾ ಕುಂದಾಪುರ್ ದನಿಯೆತ್ತಿದ್ದಾರೆ.
ಮನೆ ಕೆಲಸದ ಜವಾಬ್ದಾರಿಯನ್ನು ನರಕ ನಿವಾಸಿಗಳ ಮೇಲೆ ಹೇರಲಾಗುತ್ತದೆ ಎಂದು ಹೇಳುವ ಟಾಸ್ಕ್ ಶುರುವಾಗಿದೆ. ಚೈತ್ರಾ ಕುಂದಾಪುರ್ ನರಕ ನಿವಾಸದಲ್ಲಿದ್ದು, ಕೆಲಸ ಶುರು ಮಾಡಿಕೊಂಡಿದ್ದಾರೆ. ಚೈತ್ರಾ ಹಣ್ಣೊಂದನ್ನು ಮತ್ತೋರ್ವರ ಕೈಯಿಂದ ಕಿತ್ತು ತಿಂದಿದ್ದಾರೆ. ಇದು ವಾದ ವಿವಾದಕ್ಕೆ ಕಾರಣವಾಗಿದೆ. ಹಣ್ಣು ಕೂಡಾ ಟಾಸ್ಕ್ನ ಒಂದು ಭಾಗವಾಗಿರಬಹುದು. ಮಾತಿಗೆ ಮಾತು ಬೆಳದಂತೆ ಮಾತಾಡಬಾರದು ಎಂಬ ಸ್ಪರ್ಧಿಯ ದನಿಯೊಂದು ಕೇಳಿ ಬರುತ್ತದೆ. ಮಾತನಾಡಬಾರದು ಎಂದು ರೂಲ್ ಬುಕ್ನಲ್ಲಿದ್ದರೆ ಹೇಳಿ ಮಾತನಾಡಲ್ಲ ಎಂದು ಚೈತ್ರಾ ಗರಂ ಆಗಿದ್ದಾರೆ. ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಿರುವ ಕಲರ್ಸ್ ಕನ್ನಡ, ''ಮೊದಲ ದಿನವೇ ಸ್ವರ್ಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ರಾ ಚೈತ್ರಾ?. ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ - ಶುಕ್ರ ರಾತ್ರಿ 9:30ಕ್ಕೆ ಎಂಬ ಕ್ಯಾಪ್ಷನ್ ಕೊಟ್ಟಿದೆ.