ಹೈದರಾಬಾದ್: 77ನೇ ಕೇನ್ಸ್ ಚಲನಚಿತ್ರೋತ್ಸವ ಮುಕ್ತಾಯ ಹಂತ ತಲುಪಿದ್ದು, ಪ್ರತಿಷ್ಠಿತ ಪಾಮ್ ಡಿ'ಓರ್ ಪ್ರಶಸ್ತಿಯನ್ನು ಯಾರು ಮುಡಿಗೇರಿಸಿಕೊಳ್ಳುತ್ತಾರೆ ಎಂಬ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ. ಕೇನ್ಸ್ 2024 ಸಮಾರೋಪ ಸಮಾರಂಭವು ಫ್ರಾನ್ಸ್ ಸಮಯ ಸಂಜೆ 6:45ಕ್ಕೆ, ಭಾರತೀಯ ಕಾಲಮಾನ ರಾತ್ರಿ 10:15ಕ್ಕೆ ಪ್ರಾರಂಭವಾಗಲಿದೆ. ಸಮಾರಂಭದ ನೇರ ಪ್ರಸಾರವನ್ನು ಬ್ರೂಟ್ ಇಂಟರ್ನ್ಯಾಷನಲ್ ಅಥವಾ ಫ್ರಾನ್ಸ್ನಲ್ಲಿದ್ದರೆ ಫ್ರಾನ್ಸ್ 2 ನಲ್ಲಿ ವೀಕ್ಷಿಸಬಹುದು.
ಎಲ್ಲರ ಕಣ್ಣುಗಳು ಮುಖ್ಯ ಸ್ಪರ್ಧೆಯಲ್ಲಿ ಪ್ರಥಮ ಪ್ರದರ್ಶನ ಕಂಡ 22 ಚಿತ್ರಗಳ ಮೇಲೆ ನೆಟ್ಟಿದೆ. ಈ ಎಲ್ಲ ಸಿನಿಮಾಗಳು ಪಾಮ್ ಡಿ'ಓರ್ ಮತ್ತು ಗ್ರ್ಯಾಂಡ್ ಪ್ರಿಕ್ಸ್, ಅತ್ಯುತ್ತಮ ನಟಿ ಮತ್ತು ಅತ್ಯುತ್ತಮ ನಟನಂತಹ ಇತರ ಅಪೇಕ್ಷಿತ ಬಹುಮಾನಗಳಿಗಾಗಿ ಪೈಪೋಟಿ ನಡೆಸುತ್ತಿವೆ. ಈ ಬಾರಿ ಗ್ರೆಟಾ ಗೆರ್ವಿಗ್ ನೇತೃತ್ವದ ಒಂಬತ್ತು ಸದಸ್ಯರು ತೀರ್ಪುಗಾರರಾಗಿದ್ದಾರೆ.
ಕೇನ್ಸ್ 2024ನಲ್ಲಿ ಪಾಮ್ ಡಿ'ಓರ್ ಪ್ರಶಸ್ತಿಗೆ ಮುಂಚೂಣಿಯಲ್ಲಿರುವ ಸಿನಿಮಾಗಳು: ಮೊಹಮ್ಮದ್ ರಸೌಲೋಫ್ ಅವರ 'ದಿ ಸೀಡ್ ಆಫ್ ದಿ ಸೇಕ್ರೆಡ್ ಫಿಗ್' ಮತ್ತು ಸೀನ್ ಬೇಕರ್ ಅವರ ಅನೋರಾ ಹಾಗೂ ಭಾರತವನ್ನು ಪ್ರತಿನಿಧಿಸುತ್ತಿರುವ ಪಾಯಲ್ ಕಪಾಡಿಯಾ ಅವರ 'ಆಲ್ ವಿ ಇಮ್ಯಾಜಿನ್ ಆಸ್ ಲೈಟ್' ಪ್ರಶಸ್ತಿ ಜಯಿಸುವ ಸಾಲಿನ ಮುಂಚೂಣಿ ಸಿನಿಮಾಗಳಾಗಿವೆ.
ಮೊಹಮ್ಮದ್ ರಸೌಲೋಫ್ ನಿರ್ದೇಶನದ ದಿ ಸೀಡ್ ಆಫ್ ದಿ ಸೇಕ್ರೆಡ್ ಫಿಗ್ ಸಿನಿಮಾ 2022ರಲ್ಲಿನ ಇರಾನ್‌ನ ಪ್ರಕ್ಷುಬ್ಧ ಪರಿಸ್ಥಿತಿ ಮತ್ತು ಇರಾನಿನ ಕುಟುಂಬದ ಹೋರಾಟದ ಕಥಾಹಂದರ ಹೊಂದಿದೆ. ಇರಾನ್‌ನಲ್ಲಿಯೇ ಗೌಪ್ಯವಾಗಿ ಚಿತ್ರೀಕರಿಸಲಾದ ಚಿತ್ರವು ನೈಜ ದೃಶ್ಯಗಳನ್ನು ಒಳಗೊಂಡಿದೆ. ರಸೌಲೋಫ್ ಅವರು ಸೊಹೈಲಾ ಗೊಲೆಸ್ತಾನಿ ನಟನೆ ಮತ್ತು ಮಿಸ್ಸಾಗ್ ಝರೆಹ್ ಅವರ ಛಾಯಾಚಿತ್ರಗಳನ್ನು ಹೆಮ್ಮೆಯಿಂದ ಪ್ರದರ್ಶಿಸಿದ್ದಾರೆ.