ನವದೆಹಲಿ:ತೆಲುಗು ನಟ ಅಲ್ಲು ಅರ್ಜುನ್ ಅಭಿನಯದ 'ಪುಷ್ಪಾ 2: ದಿ ರೂಲ್' ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಎಲ್ಲ ದಾಖಲೆಗಳನ್ನು ಪುಡಿಗಟ್ಟುತ್ತಾ ಭರ್ಜರಿಯಾಗಿ ಮುಂದೆ ಸಾಗುತ್ತಿದೆ. ಚಿತ್ರ ತೆರೆಕಂಡ ನಾಲ್ಕೇ ದಿನದಲ್ಲಿ 800 ಕೋಟಿ ರೂಪಾಯಿ ಬಾಚಿದೆ. ಅದ್ಭುತ ಯಶಸ್ಸಿನ ಅಲೆಯಲ್ಲಿರುವ 'ಪುಷ್ಪಾರಾಜ್'ಗೆ ಬಾಲಿವುಡ್ ಮೆಗಾಸ್ಟಾರ್ನಿಂದ ಬಹುಪರಾಕ್ ಸಿಕ್ಕಿದೆ.
ಬಾಲಿವುಡ್ ಬಾದ್ಶಾ ಅಮಿತಾಭ್ ಬಚ್ಚನ್ ಅವರು ಪುಷ್ಪಾ ಮತ್ತು ಅಲ್ಲು ಅರ್ಜುನ್ ಅವರನ್ನು ಹೊಗಳಿದ್ದಾರೆ. ನಮ್ಮಂತಹ ನಟರಿಗೆ ಅಲ್ಲು ಸ್ಫೂರ್ತಿಯಾಗಿದ್ದಾರೆ. ನಾನು ಅವರ ಅಪ್ಪಟ ಅಭಿಮಾನಿ ಎಂದೆಲ್ಲಾ ಬಣ್ಣಿಸಿದ್ದಾರೆ.
ಕಳೆದ ವಾರ ನಡೆದ ಕಾರ್ಯಕ್ರಮವೊಂದರಲ್ಲಿ, ಅಲ್ಲು ಅರ್ಜುನ್ಗೆ ಹಿಂದಿ ಸಿನಿಮಾದ ನಾಯಕರಲ್ಲಿ ನಿಮಗೆ ಸ್ಫೂರ್ತಿ ಯಾರು ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಅವರು ಅಮಿತಾಭ್ ಬಚ್ಚನ್ ಎಂದು ಉತ್ತರಿಸಿದ್ದರು. ಈ ವಿಡಿಯೋವನ್ನು ಬಚ್ಚನ್ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಂಚಿಕೊಂಡು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.
'ನಿಮ್ಮ ಮಾತುಗಳು ನನ್ನಲ್ಲಿ ವಿನಮ್ರತೆ ಮೂಡಿಸಿದೆ. ನೀವು ನನ್ನ ಅರ್ಹತೆಗಿಂತ ಹೆಚ್ಚಿನದ್ದನ್ನು ಹೇಳಿದ್ದೀರಿ. ನಾವೆಲ್ಲರೂ ನಿಮ್ಮ ಕೆಲಸ ಮತ್ತು ಪ್ರತಿಭೆಗೆ ಅಭಿಮಾನಿಗಳು. ನೀವು ನಮಗೆಲ್ಲರಿಗೂ ಸ್ಫೂರ್ತಿ ನೀಡಿದ್ದೀರಿ. ನಿಮಗೆ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ.