ವಿಜಯವಾಡ (ಆಂಧ್ರಪ್ರದೇಶ): ಬಾಲಿವುಡ್ ನಟಿ ಕಾದಂಬರಿ ಜೇತ್ವಾನಿ ಅವರು ಶುಕ್ರವಾರದಂದು ಎನ್‌ಟಿಆರ್ ಪೊಲೀಸ್ ಕಮಿಷನರ್ ಎಸ್‌ವಿ ರಾಜಶೇಖರ್ ಬಾಬು ಅವರನ್ನು ಭೇಟಿಯಾಗಿ ರಾಜಕೀಯ ಮುಖಂಡ, ಚಲನಚಿತ್ರ ನಿರ್ಮಾಪಕ ಕೆವಿಆರ್ ವಿದ್ಯಾಸಾಗರ್ ವಿರುದ್ಧ ದೂರು ದಾಖಲಿಸಿದ್ದಾರೆ. ವೈಎಸ್‌ಆರ್‌ಸಿಪಿ ಆಡಳಿತದಲ್ಲಿ ನಟಿ ಅನುಭವಿಸಿದ ಕಿರುಕುಳದ ಬಗ್ಗೆ ಮಹತ್ವದ ವಿವರಗಳನ್ನು ದೂರಿನಲ್ಲಿ ಬಹಿರಂಗಪಡಿಸಲಾಗಿದೆ.
ಫೆಬ್ರವರಿಯಲ್ಲಿ ಇಬ್ರಾಹಿಂಪಟ್ಟಣಂ ಪೊಲೀಸರೊಂದಿಗೆ ಕೆವಿಆರ್ ವಿದ್ಯಾಸಾಗರ್ ಅವರು ತಮ್ಮ ಕುಟುಂಬದ ಮೇಲೆ ಇಲ್ಲಸಲ್ಲದ ಸುಲಿಗೆ ಪ್ರಕರಣ (forgery and extortion) ಹೊರಿಸಿದ್ದಾರೆ. ವಿದ್ಯಾಸಾಗರ್ ಸೂಚನೆ ಮೇರೆಗೆ ಪೊಲೀಸರು ಮುಂಬೈಗೆ ಆಗಮಿಸಿದರು. ಯಾವುದೇ ಮುನ್ಸೂಚನೆಯಿಲ್ಲದೇ ನನ್ನನ್ನು ಮತ್ತು ನನ್ನ ಕುಟುಂಬಸ್ಥರನ್ನು ಬಂಧಿಸಿ ವಿಜಯವಾಡಕ್ಕೆ ಕರೆತಂದು ಕಸ್ಟಡಿಯಲ್ಲಿ ಇರಿಸಲಾಯಿತು ಎಂದು ನಟಿ ಆರೋಪಿಸಿದ್ದಾರೆ.
ಕಾನೂನುಬಾಹಿರ ಬಂಧನ ಮತ್ತು ದುರ್ವರ್ತನೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸಹ ಭಾಗಿಯಾಗಿದ್ದಾರೆಂದು ನಟಿ ಆರೋಪಿಸಿದ್ದಾರೆ. ಕಾದಂಬರಿ ಪ್ರಕಾರ, ಇಬ್ರಾಹಿಂಪಟ್ಟಣಂ ಪೊಲೀಸರೊಂದಿಗೆ ಮುಂಬೈಗೆ ಬಂದ ತಂಡದಲ್ಲಿ ಮೂವರು ಐಪಿಎಸ್ ಅಧಿಕಾರಿಗಳು ಮತ್ತು ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ಸಾಮಾನ್ಯ ಉಡುಗೆ ಧರಿಸಿದ್ದರು. ಜೇತ್ವಾನಿ ಮತ್ತು ಪೋಷಕರನ್ನು ಸುಮಾರು 40 ದಿನಗಳ ಕಾಲ ವಶದಲ್ಲಿಡಲಾಗಿತ್ತು.
ತಮ್ಮ ವಿರುದ್ಧ ಪ್ರಕರಣ ದಾಖಲಾಗುವ ಮುನ್ನ ಮುಂಬೈನ ತಮ್ಮ ನಿವಾಸದಲ್ಲಿ ಮಾತುಕತೆ ನಡೆಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸೀತಾರಾಮಾಂಜನೇಯು, ಕಾಂತಿ ರಾಣಾ ಮತ್ತು ವಿಶಾಲ್ ಗುನ್ನಿ ಈ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕಾದಂಬರಿ ತಮ್ಮ ವಕೀಲರೊಂದಿಗೆ ವಿಜಯವಾಡದ ರಾಜಶೇಖರ್ ಬಾಬು ಅವರ ಕಚೇರಿಗೆ ತೆರಳಿ ನ್ಯಾಯ ಕೋರಿದ್ದಾರೆ. ತಾವು ಎದುರಿಸುತ್ತಿರುವ ಕಿರುಕುಳದ ಬಗ್ಗೆ ಸಂಪೂರ್ಣ ವಿವರ ನೀಡಿದ್ದಾರೆ. ನಟಿಯ ದೂರಿನ ಪ್ರತಿಯನ್ನು ಎಸಿಪಿ ಶ್ರವಂತಿ ರಾಯ್ (ವಿಚಾರಣಾ ಅಧಿಕಾರಿ)ಗೆ ನೀಡಲಾಯಿತು. ಆಡಿಯೋ, ವಿಡಿಯೋ ಮತ್ತು ಫೋಟೋಗಳು ಸೇರಿದಂತೆ ಕೆಲ ಸಾಕ್ಷ್ಯಗಳನ್ನು ನಟಿ ಒದಗಿಸಿದ್ದಾರೆ. ಶುಕ್ರವಾರ ಸಂಜೆ 6:15ಕ್ಕೆ ವಿಚಾರಣೆ ಆರಂಭವಾಗಿ ರಾತ್ರಿ 10:15ರ ವರೆಗೆ ನಡೆಯಿತು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿರು ನಟಿ ಕಾದಂಬರಿ ಜೇತ್ವಾನಿ, "ದೇಶದ ಪ್ರಾಮಾಣಿಕ ನಾಗರಿಕರು ತಮ್ಮ ಹೆಸರನ್ನು ವಿವಾದಗಳಲ್ಲಿ ಸಿಲುಕಿಕೊಳ್ಳಲಿ ಎಂದು ಎಂದಿಗೂ ಬಯಸುವುದಿಲ್ಲ. ಆದ್ರೆ ನನ್ನನ್ನು ಕಾನೂನುಬಾಹಿರವಾಗಿ ಈ ವಿಷಯಕ್ಕೆ ಎಳೆಯಲಾಗಿದೆ. ಜನರು ತಮಗೆ ಬೇಕಾದುದನ್ನು ಮಾಡುತ್ತಾರೆ. ಆದ್ರೆ ನನಗೆ ದೇವರ ಮೇಲೆ ಸಂಪೂರ್ಣ ನಂಬಿಕೆಯಿದೆ. ದೇಶದಲ್ಲಿ ಒಳ್ಳೆಯ ಜನರಿದ್ದಾರೆ. ಪ್ರಾಮಾಣಿಕ ಜನರು ಮುಗ್ಧರಿಗೆ ನೋವಾಗಲು ಬಿಡುವುದಿಲ್ಲ'' ಎಂದು ತಿಳಿಸಿದರು.
ಪವರ್ಫುಲ್ ಜನರಿಗೆ ಕ್ಲೀನ್ ಚಿಟ್ ನೀಡಲು ನನ್ನ ಕುಟುಂಬಕ್ಕೆ ಕಿರುಕುಳ ನೀಡಲಾಯಿತು ಎಂದು ನಟಿ ಹೇಳಿಕೊಂಡಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ರಾಜಕೀಯ ಕೈದಿಗಳು ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಈ ಹಿಂದೆ ವಿಜಯವಾಡ ಕಮಿಷನರ್ ಕಂಠಿ ರಾಣಾ ಟಾಟಾ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ ಅಧಿಕಾರಿಗಳೇ ಇದಕ್ಕೆ ಹೊಣೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.